ಮಾನ್ಯ ಅರಣ್ಯ ಸಚಿವರ ಗಮನಕ್ಕೆ……
ಒಂದು ಆಗ್ರಹ ಪೂರ್ವಕ ಮನವಿ………
ಮಾನ್ಯ ಅರಣ್ಯ ಸಚಿವರ ಗಮನಕ್ಕೆ……
ಒಂದು ಆಗ್ರಹ ಪೂರ್ವಕ ಮನವಿ………
ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳ ಮೇಲಿನ ಆರೋಪ ಮತ್ತು ಪರಿಸರ ಮತ್ತು ಜೀವ ಸಂಕುಲದ ರಕ್ಷಣಾ ಪ್ರಯತ್ನಗಳು…….
” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು ” ಎಂದು 12ನೆಯ ಶತಮಾನದ ವಚನ ಸಾಹಿತ್ಯ ಮತ್ತು ಸಂಸ್ಕೃತಿ ಜನತೆಗೆ ಕರೆ ನೀಡುತ್ತದೆ. ಅಂದರೆ ಈ ಸೃಷ್ಟಿಯಲ್ಲಿ ಅತಿ ಮುಖ್ಯ ಪಾತ್ರವಾದ ಪರಿಸರದಲ್ಲಿರುವ ಪ್ರತಿಜೀವಿಗೂ ಬದುಕುವ ಸ್ವಾತಂತ್ರ್ಯ ಮತ್ತು ಹಕ್ಕು ಇದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಆ ಮೂಲಕ ಸೃಷ್ಟಿಯ ಸಹಜತೆಯನ್ನು ಕಾಪಾಡಬೇಕು.
ಉದ್ದೇಶಪೂರ್ವಕವಾಗಿ, ನಮ್ಮ ಅನುಕೂಲಕರ ಸ್ವಾರ್ಥಕ್ಕಾಗಿ ಯಾವುದೇ ಜೀವಿಯನ್ನು ನಾಶಪಡಿಸಿದರೆ ಪ್ರಕೃತಿಯ ಸಮತೋಲನ ತಪ್ಪುತ್ತದೆ. ಆದ್ದರಿಂದ ಯಾವುದೇ ಜೀವರಾಶಿಗಳಿಗೆ ತೊಂದರೆ ಕೊಡದೆ ನಮ್ಮ ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂಬುದು ಒಂದು ಅಲಿಖಿತ ಪ್ರಾಕೃತಿಕ ನಿಯಮ.
ಆಹಾರದ ದೃಷ್ಟಿಯಿಂದ ಈ ನಿಯಮದಲ್ಲಿ ಒಂದಷ್ಟು ಹೊಂದಾಣಿಕೆಗಳಿವೆ. ಅಂದರೆ ಕೆಲವು ಪ್ರಾಣಿಗಳು ಮತ್ತೊಂದು ಪ್ರಾಣಿಯನ್ನು ಕೊಂದು ಆಹಾರವಾಗಿ ಉಪಯೋಗಿಸುತ್ತವೆ. ಅದರಲ್ಲಿ ಮನುಷ್ಯನು ಒಬ್ಬ. ಪ್ರಾಣಿಗಳು ತಮಗೆ ಅವಶ್ಯ ಇರುವಷ್ಟು ಆಹಾರವನ್ನು ಮಾತ್ರ ಸೇವಿಸುತ್ತವೆ. ಜೊತೆಗೆ ಅವು ಆಹಾರವನ್ನು ವ್ಯಾಪಾರ ಮಾಡುವುದಿಲ್ಲ. ಆದರೆ ಮಾನವ ನಾಗರಿಕತೆಯಲ್ಲಿ ಆಹಾರವು ಒಂದು ವ್ಯಾಪಾರ ಉದ್ಯಮವಾಗಿರುವುದರಿಂದ ಅದು ನಿರಂತರವಾಗಿ ಹದ್ದು ಮೀರಿ ನಡೆಯುತ್ತಿದೆ. ಆದರೂ ಈ ಹಂತದವರೆಗೆ ಇದೆಲ್ಲವೂ ಸಹನೀಯ. ಅದನ್ನು ಹೊರತುಪಡಿಸಿ ಮಾಡುವ ಎಲ್ಲಾ ಹಿಂಸೆಗಳು ಖಂಡನೀಯ ಮತ್ತು ಪ್ರಕೃತಿಗೆ ಮಾಡುವ ದ್ರೋಹವಾಗುತ್ತದೆ.
ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಎರಡು ರೀತಿಯ ಚರ್ಚೆಗಳು ನಡೆಯುತ್ತಿವೆ. ಒಂದು ಕಡೆ ಕಾಡಿನ ಅನೇಕ ಜೀವರಾಶಿಗಳು ಅಪಾಯದ ಅಂಚಿನಲ್ಲಿವೆ. ಅದನ್ನು ಉಳಿಸಬೇಕು, ಅದಕ್ಕಾಗಿ ವೈಜ್ಞಾನಿಕ ಸಂಶೋಧನೆಗಳ ಅವಶ್ಯಕತೆ ಇದೆ ಎಂಬ ಆಂದೋಲನಗಳು, ಇನ್ನೊಂದು ಕಡೆ ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಅದರ ಪಾಡಿಗೆ ಬಿಟ್ಟು ಬಿಟ್ಟರೆ ಸಾಕು. ಪರಿಸರವೇ ಅದರ ಸಮತೋಲನ ಕಾಯ್ದುಕೊಳ್ಳುತ್ತದೆ. ಅನಾವಶ್ಯಕವಾಗಿ ನಾವು ಅದನ್ನು ಉಳಿಸಲು ಹೋಗಿ ನಾಶಪಡಿಸುವ ಕೆಲಸ ಮಾಡಬಾರದು ಎಂಬುದು ಇನ್ನೊಂದು ವಾದ. ಅಂದರೆ ಪ್ರಕೃತಿಯ ಸಹಜತೆಯನ್ನು ಕಾಪಾಡಬೇಕೆಂದು ಅರ್ಥ.
ಒಂದು ಕಡೆ ಹುಲಿ ಸಂರಕ್ಷಣೆ, ಕರಡಿ ಸಂರಕ್ಷಣೆ, ಕೀಟ ಸಂರಕ್ಷಣೆ, ಮೊಸಳೆ ಸಂರಕ್ಷಣೆ, ಹಾವಿನ ಸಂರಕ್ಷಣೆ ಹೀಗೆ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಉಳಿಸಲು ಸರ್ಕಾರ ಮತ್ತು ಕೆಲವು ಸ್ವಯಂಸೇವಾ ಪ್ರಾಣಿ, ಪಕ್ಷಿ, ಪರಿಸರ ತಜ್ಞರು ಸಂಶೋಧನೆಗಳಲ್ಲಿ ತೊಡಗಿ ಜೀವರಾಶಿಗಳನ್ನು ಉಳಿಸಲು ಮತ್ತು ಬೆಳೆಸಲು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಒಂದು ಹಂತದಲ್ಲಿ ಇದು ಸಹನೀಯವೇನು ಆಗಿತ್ತು. ಆದರೆ ಈ ಸಂಶೋಧನೆಯ ಹೆಸರಲ್ಲಿ ವ್ಯಾಪಾರ, ಉದ್ದಿಮೆ, ಪ್ರವಾಸೋದ್ಯಮ, ಜಂಗಲ್ ಲಾಡ್ಜ್ ಸ್ಥಾಪನೆ, ಪ್ರಚಾರ, ಪ್ರಶಸ್ತಿ ಮುಂತಾದ ತೆವಲಿಗೆ ಬಿದ್ದ ಕೆಲವರು ವ್ಯವಸ್ತೆಯನ್ನೇ ನಾಶ ಮಾಡುತ್ತಿದ್ದಾರೆ ಎಂಬ ಕೂಗೂ ಬಲವಾಗಿ ಕೇಳಿ ಬರುತ್ತಿದೆ. ಕೆಲವು ಕಡೆ ಅದಕ್ಕೆ ಪೂರಕವಾದ ಸಾಕ್ಷಿಗಳು ದೊರೆಯುತ್ತಿವೆ.
ಇಂತಹ ಒಂದು ಆರೋಪ ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕಾರ್ಯದಲ್ಲಿ ನಿರತವಾಗಿರುವ ಎರಡು ಕೇಂದ್ರಗಳ ಮೇಲೆ ಕೇಳಿ ಬರುತ್ತಿದೆ. ಕೆಲವು ಪರಿಸರ ತಜ್ಞರು ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳು ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಮತ್ತು ಪ್ರವಾಸೋದ್ಯಮ ರೂಪವಾಗಿ ಅಭಿವೃದ್ಧಿ ಹೊಂದಿದ್ದು ಅಲ್ಲಿ ಅನಾವಶ್ಯಕವಾಗಿ ಸಂಶೋಧನೆಗಿಂತ ಹೆಚ್ಚಾಗಿ ಕಾಳಿಂಗವನ್ನು ಹಿಂಸಿಸಿ, ಕೃತಕವಾಗಿ ಸಂತಾನಾಭಿವೃದ್ಧಿ ಮಾಡಿ, ಪರಿಸರಕ್ಕೂ ಹಾನಿ ಮಾಡಿ, ಅರಣ್ಯ ಇಲಾಖೆಯ ನೀತಿ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ವ್ಯಾಪಾರ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ತನಿಖೆಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ. ಅದು ಅವ್ಯಾಹತವಾಗಿ ನಡೆಯುತ್ತಿದೆ. ಕನಿಷ್ಠ ಈಗಲಾದರೂ ತನಿಖೆ ಮಾಡಬೇಕೆಂದು ಸಾಕ್ಷಿಗಳ ಸಮೇತ ಒತ್ತಾಯಗಳು ಕೇಳಿ ಬಂದಿವೆ.
ಈ ವಿಷಯವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಪರಿಸರ ಉಳಿಯಲು, ಅಳಿವಿನಂಚಿನಲ್ಲಿರುವ ಪ್ರಾಣಿಪಕ್ಷಿಗಳು ಉಳಿಯಲು ನಿಜಕ್ಕೂ ಸಂಶೋಧನೆಯ ಅಗತ್ಯ ಇದೆಯೇ ? ಒಂದು ವೇಳೆ ಇದ್ದರೆ ಅದು ಯಾವ ರೀತಿ ಇರಬೇಕು ? ಅದರಿಂದ ನಿಜಕ್ಕೂ ಉತ್ತಮ ಫಲಿತಾಂಶ ದೊರೆಯುತ್ತಿದೆಯೇ ? ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಆ ರೀತಿಯ ಸಂಶೋಧನೆಗೆ ಅನುಮತಿಯನ್ನು ನೀಡಲೇಬಾರದು. ಒಂದು ವೇಳೆ ಸಂಶೋಧನೆ ಮಾಡಬೇಕಿದ್ದರೆ ಅದು ಕಾಡಿನಲ್ಲಿಯೇ ಇರಬೇಕೇ ಅಥವಾ ಕಾಡಿನ ಹೊರಗಡೆಯೇ ಮಾಡಬೇಕೆ ಮತ್ತು ಅದಕ್ಕೆ ನಿಗದಿಪಡಿಸಬೇಕಾದ ಕಾಲಾವಧಿ ಏನು ? ಅದು ನೀಡುವ ಫಲಿತಾಂಶಗಳೇನು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕಾಗುತ್ತದೆ. ಜೊತೆಗೆ ಸಂಶೋಧನೆಗೆ ತೊಡಗುವವರ ವಿಷಯ ಜ್ಞಾನವನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಇಲ್ಲದಿದ್ದರೆ ಸಾಮಾನ್ಯರೆಲ್ಲ ಈ ಸಂಶೋಧನೆ ಹೆಸರಿನಲ್ಲಿ ಇರುವ ವ್ಯವಸ್ಥೆಯನ್ನು ಹಾಳು ಮಾಡಬಹುದು.
ಕೆಲವು ವರ್ಷಗಳ ಹಿಂದೆ ಉಲ್ಲಾಸ್ ಕಾರಂತ ಎಂಬುವವರು ಹುಲಿಯ ಗಣತಿ ಮತ್ತು ರಕ್ಷಣೆ ಹಾಗೂ ಸಂಶೋಧನೆಗಾಗಿ ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅದರ ಚಲನವಲನಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಆಗ ಒಂದಷ್ಟು ಹುಲಿಗಳು ಸಾವನ್ನಪ್ಪಿದವು. ಅದಕ್ಕೆ ರೇಡಿಯೋ ಕಾಲರ್ ಅಳವಡಿಕೆಯೇ ಕಾರಣ ಎಂದು ಆರೋಪಿಸಲಾಗಿತ್ತು. ಅದು ನಿಜವೋ ಸುಳ್ಳು ನನಗೆ ಮಾಹಿತಿ ಇಲ್ಲ. ಆದರೆ ಸುದ್ದಿಯಂತೂ ಪ್ರಸಾರವಾಗಿತ್ತು.
ಏನೇ ಆಗಲಿ ಪರಿಸರವನ್ನು, ಪ್ರಾಣಿ ಪಕ್ಷಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸಗಳಾಗಲಿ. ಆದರೆ ಆ ಹೆಸರಿನಲ್ಲಿ ಪ್ರವಾಸೋದ್ಯಮ, ಜಂಗಲ್ ಲಾಡ್ಜ್, ಹಣ ಮಾಡುವ ದಂಧೆ ಅಥವಾ ಅಜ್ಞಾನದ ಹಠಮಾರಿ ತೆವಲಿನ ಸಂಶೋಧನೆ ಆಗಬಾರದು. ಅದರಿಂದ ಒಳ್ಳೆಯದಕ್ಕಿಂತ ಕೆಡುಕೇ ಹೆಚ್ಚು.
ಅದಕ್ಕೆ ಪರ್ಯಾಯವಾಗಿ ಪರಿಸರ ಮತ್ತು ಅದರ ಜೀವರಾಶಿಗಳ ಬಗ್ಗೆ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ ಎನಿಸುತ್ತದೆ. ಇತ್ತೀಚೆಗೆ ಆತ್ಮೀಯ ಗೆಳೆಯರಾದ
ಶ್ರೀ ಈಶ್ವರ ಪ್ರಸಾದ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸತತವಾಗಿ 13ನೇ ವರ್ಷ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಪರಿಸರ ಮತ್ತು ಜೀವ ರಾಶಿಗಳ ಬಗ್ಗೆ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸುತ್ತಾರೆ. ಈ ಬಾರಿ ಮಿಡತೆಗಳ ಬಗ್ಗೆ ಅತ್ಯುತ್ತಮವಾದ ಮತ್ತು ಕುತೂಹಲಕಾರಿ ಪ್ರದರ್ಶನ ಏರ್ಪಡಿಸಿದ್ದರು.
ಹಾಗೆಯೇ ನಟರಾಜ್ ಮಂದಗದ್ದೆ ಎನ್ನುವವರು ಅನೇಕ ಛಾಯಾಚಿತ್ರಗಳೊಂದಿಗೆ ರಾಜ್ಯದ ಸಾಕಷ್ಟು ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಪ್ರದರ್ಶನ ಏರ್ಪಡಿಸಿ ಉಪನ್ಯಾಸವನ್ನು ನೀಡುತ್ತಾರೆ. ಇವು ಕನಿಷ್ಠ ಯುವ ಜನಾಂಗದಲ್ಲಿ, ವಿದ್ಯಾರ್ಥಿಗಳಲ್ಲಿ ಪ್ರಾಣಿಪಕ್ಷಿಗಳ ಬಗ್ಗೆ ಕುತೂಹಲವನ್ನು ಮೂಡಿಸುವ ಮತ್ತು ಅವುಗಳ ಸಂರಕ್ಷಣೆಯ ಹಾದಿಯಲ್ಲಿ ಉತ್ತಮ ಪ್ರಯತ್ನವಾಗಿದೆ.
ಏನೇ ಆಗಲಿ ಪರಿಸರ ನಮ್ಮದು. ನಾವು ಆ ಜೀವ ರಾಶಿಗಳಲ್ಲಿ ಒಂದು ಭಾಗ. ಅದರ ಹಿತರಕ್ಷಣೆಗಾಗಿ ನಮ್ಮೆಲ್ಲ ಪ್ರಯತ್ನಗಳು ಸಾಗಲಿ. ಮಾನ್ಯ ಅರಣ್ಯ ಮಂತ್ರಿಗಳು ಮತ್ತು ಕರ್ನಾಟಕ ಸರ್ಕಾರ ಈಗ ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದ ಮೇಲಿರುವ ಆರೋಪಗಳ ಬಗ್ಗೆ ತಕ್ಷಣವೇ ತನಿಖೆ ಮಾಡಿಸಿ ಸತ್ಯಾಂಶ ಹೊರಬರುವಂತಾಗಲಿ. ಇಲ್ಲದಿದ್ದರೆ ಕಾಳಿಂಗದಂತೆ ಇತರ ಸಂಶೋಧನಾ ಕೇಂದ್ರಗಳ ಪರಿಸರ ವಿರುದ್ಧ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಪ್ರಾಣಿಗಳು ಅನಾವಶ್ಯಕವಾಗಿ ಹಿಂಸೆ ಅನುಭವಿಸುವಂತಾಗುತ್ತದೆ. ಅದು ಅಕ್ಷಮ್ಯ ಅಪರಾಧ. ಜೀವ ವಿರೋಧಿ ನಿಲುವು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068……

