ಅಂಕಣ 

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್……

Taluknewsmedia.com

ಐ ಲವ್ ಮಹಮ್ಮದ್,
ವರ್ಸಸ್
ಐ ಲವ್ ಮಹದೇವ್/ ಜೈ ಶ್ರೀರಾಮ್……

ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ……

ಉಕ್ರೇನಿಯನ್ ಜನರು ಅನುಭವಿಸುತ್ತಿರುವ ನರಕಯಾತನೆಯಾಗಲಿ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಾಗಲಿ, ಆಫ್ರಿಕಾದ ಆಂತರಿಕ ಸಂಘರ್ಷದಿಂದ ಬಳಲುತ್ತಿರುವ ದೇಶಗಳಾಗಲಿ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾದ ಕೆಲವು ದೇಶಗಳ ಹಿಂಸಾತ್ಮಕ ಘಟನೆಗಳಾಗಲಿ ಇನ್ನೂ ಜನರಿಗೆ ಬುದ್ಧಿ ಕಲಿಸಿದಂತೆ ಕಾಣುತ್ತಿಲ್ಲ.
ಕೊರೋನ ಎಂಬ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿತು. ಆ ಸಮಯದಲ್ಲಿ ಬಹಳಷ್ಟು ಜನರಿಗೆ ಸನ್ಯಾಸ ವೈರಾಗ್ಯ ಉಂಟಾಯಿತು. ಜೀವನ ನಶ್ವರ, ಯಾವಾಗ ಬೇಕಾದರೂ, ಯಾವ ರೂಪದಲ್ಲಾದರೂ ಸಾವು ಬರಬಹುದು. ಆದ್ದರಿಂದ ಒಂದಷ್ಟು ತಾಳ್ಮೆಯಿಂದ, ಪ್ರೀತಿಯಿಂದ ದುರಾಸೆಗಳಿಲ್ಲದೆ ಬದುಕಬೇಕು ಎಂದು ಅಂದುಕೊಂಡರು.

ಆದರೆ ಸಮಕಾಲಿನ ಜಗತ್ತು ಕೋವಿಡ್ ನಂತರ ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಸಾವೋ, ಬದುಕೋ ಒಟ್ಟಿನಲ್ಲಿ ಸಮಾಜಗಳು, ದೇಶಗಳು ಸದಾ ಸಂಘರ್ಷಮಯವಾಗಿಯೇಇರಬೇಕು ಎನ್ನುವಂತೆ ಯುದ್ದೋತ್ಸಾಹದಲ್ಲಿ ಮುನ್ನಡೆಯುತ್ತಿದೆ. ಭಾರತವು ಸಹ ಸ್ವಲ್ಪದರಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವಂತಾಯಿತು. ಇಲ್ಲದಿದ್ದರೆ ಇನ್ನೂ ಕಷ್ಟವಾಗುತ್ತಿತ್ತು.

ಇಂತಹ ಸನ್ನಿವೇಶದಲ್ಲಿ ಮತ್ತೆ ಯಾರೋ ಒಂದಷ್ಟು ಧರ್ಮಾಂಧ ಹುಚ್ಚರು, ಭಯೋತ್ಪಾದಕರು ಐ ಲವ್ ಮಹಮ್ಮದ್ ಎನ್ನುತ್ತಾ, ವಿರುದ್ಧವಾಗಿ ಐ ಲವ್ ಮಹದೇವ್/ಶ್ರೀರಾಮ್ ಎನ್ನುವ ಕಿಚ್ಚು ಹಬ್ಬಿಸಿ ದೇಶದಾದ್ಯಂತ ಗಲಭೆಗಳಂಟು ಮಾಡುವ ಸಂಚುರೂಪಿಸಿದ್ದಾರೆ.

ಜಾಗತಿಕ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವವರು ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ, ವ್ಯವಹಾರಗಳ ತೆರಿಗೆ ಸಂಘರ್ಷವನ್ನು ಅವಲೋಕಿಸಬೇಕು. ಜೊತೆಗೆ ಭಾರತದ ಚೀನಾ ಮತ್ತು ರಷ್ಯಾದೊಂದಿಗಿನ ಸ್ನೇಹ ಒಕ್ಕೂಟ ಅಮೆರಿಕಕ್ಕೆ ಉಂಟು ಮಾಡುತ್ತಿರುವ, ಅದರಲ್ಲೂ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿಗೆ ಆಗುತ್ತಿರುವ ಮಾನಸಿಕ ಒತ್ತಡದ ಪರಿಣಾಮ ಆತ ಭಾರತದ ವಿರುದ್ಧ ಸ್ವಲ್ಪಮಟ್ಟಿನ ದ್ವೇಷ ಸಾಧಿಸುತ್ತಿರುವುದು ಬಹಿರಂಗ ಸತ್ಯ.

ಅಮೆರಿಕಾದ ವಿದೇಶಾಂಗ ನೀತಿಯ ಒಂದು ಮುಖ್ಯ ಅಂಶವೆಂದರೆ ಅದು ತನ್ನ ಬಲಿಷ್ಠ ಬೇಹುಗಾರಿಕಾ ಸಂಸ್ಥೆ ಸಿಐಎ ಮುಖಾಂತರ ವಿಶ್ವದ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ತನಗೆ ವಿರುದ್ಧವಿರುವ ಸರ್ಕಾರಗಳನ್ನು ಉರುಳಿಸಲು ಅಪಾರ ಹಣ ಖರ್ಚು ಮಾಡುತ್ತದೆ ಮತ್ತು ಆ ದೇಶಗಳಲ್ಲಿ ದಂಗೆ ಉಂಟು ಮಾಡಲು ಅಥವಾ ಮತದಾನದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಜನರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತದೆ. ಈಗ ಆ ಸರದಿ ಭಾರತವೂ ಆಗಿರಬಹುದು. ಏಕೆಂದರೆ ಸಿಐಎ ನಮ್ಮ ದೇಶದೊಳಗಿನ ಅಸಮಾಧಾನವನ್ನು ತನ್ನದೇ ರೀತಿಯಲ್ಲಿ ಗ್ರಹಿಸಿ ಅದಕ್ಕೆ ತುಪ್ಪ ಸುರಿಯುತ್ತದೆ.

ಇಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಜಾಗರೂಕವಾಗಿ ಇರಬೇಕಾದ ಭಾರತ ಸರ್ಕಾರ, ಇಲ್ಲಿನ ರಾಜಕೀಯ ಪಕ್ಷಗಳು, ಜವಾಬ್ದಾರಿಯುತ ಮಾಧ್ಯಮಗಳು, ಸಂಘ ಸಂಸ್ಥೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಹಮದ್ ಮತ್ತು ಮಹದೇವ್ ನಡುವೆ ಸಂಘರ್ಷ ಏರ್ಪಡುವಂತೆ ಅಂದರೆ ಪರೋಕ್ಷವಾಗಿ ಹಿಂದೂ ಮುಸ್ಲಿಂ ಘರ್ಷಣೆ ನಡೆಯುವಂತೆ ನಡೆದುಕೊಳ್ಳುತ್ತಿರುವುದು ತೀರ ಅಪಾಯಕಾರಿ ಪ್ರವೃತ್ತಿ..

ಪ್ರಧಾನಿ ನರೇಂದ್ರ ಮೋದಿಯವರು ಸಹ ತನ್ನ ವಿದೇಶಾಂಗ ನಡವಳಿಕೆಗಳಲ್ಲಿ ನಿಯಂತ್ರಣ ಕಳೆದುಕೊಂಡು ತಪ್ಪು ನಿರ್ಧಾರ ತೆಗೆದುಕೊಂಡಿರುವಂತೆ ಕಾಣುತ್ತಿದೆ. ವಾಸ್ತವದಲ್ಲಿ ಅಮೆರಿಕಾದೊಂದಿಗಿನ ಸಂಘರ್ಷದ ಅವಶ್ಯಕತೆ ಇರಲಿಲ್ಲ. ದ್ವಿಪಕ್ಷೀಯ ಮಾತುಕತೆಯ ಮೂಲಕ ಒಂದಷ್ಟು ಪರಿಹಾರ ಸೂತ್ರಗಳನ್ನು ರೂಪಿಸಬಹುದಿತ್ತು. ಆದರೆ ಮಾನ್ಯ ಪ್ರಧಾನಿಯವರು ಪರಿಹಾರಕ್ಕೆ ಬದಲಾಗಿ ಹಠಮಾರಿ ಧೋರಣೆಯಿಂದ ಪರ್ಯಾಯಮಾರ್ಗಗಳ ಹುಡುಕಾಟದಲ್ಲಿದ್ದಾರೆ. ಪರ್ಯಾಯ ಮಾರ್ಗಗಳ ಹುಡುಕಾಟ ಒಳ್ಳೆಯದೇ ಆದರೂ ಡೊನಾಲ್ಡ್ ಟ್ರಂಪ್ ಜೊತೆಗಿನ ವೈಯಕ್ತಿಕ ಸಂಘರ್ಷ ಭಾರತದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು. ಹಾಗೆಯೇ ರಷ್ಯಾ ಮತ್ತು ಚೀನಾ ಅಧ್ಯಕ್ಷರ ಜೊತೆಗಿನ ಒಡನಾಟ ಸಹ ದುಬಾರಿಯಾಗಬಹುದು.

ಅಮೆರಿಕಾ ಮೊದಲು ಎಂಬ ಡೊನಾಲ್ಡ್ ಟ್ರಂಪ್ ನೀತಿ,
ಆತ್ಮನಿರ್ಭರ ಭಾರತ ಎಂಬ ಭಾರತದ ನಿಲುವು ಒಂದು ಹಂತದವರೆಗೆ ಮಾತ್ರ ಸೀಮಿತ. ಇಂದಿನ ಆಧುನಿಕ ಯುಗದಲ್ಲಿ ಜಗತ್ತೇ ಕಿರಿದಾಗುತ್ತಿರುವಾಗ, ಜನರ ಅವಶ್ಯಕತೆಗಳು ದೊಡ್ಡದಾಗುತ್ತಿರುವಾಗ ಸಹಕಾರ ಮತ್ತು ಸಮನ್ವಯ ಬಹಳ ಮುಖ್ಯ. ಸಂಘರ್ಷದಿಂದ ನಷ್ಟವೇ ಹೆಚ್ಚು.

ಈ ವಿಷಯ ಪ್ರಸ್ತಾಪವಾಗಲು ಮುಖ್ಯ ಕಾರಣ ನಿಧಾನವಾಗಿ ಪ್ರಾರಂಭವಾಗುತ್ತಿರುವ ಮಹಮ್ಮದ್ ವರ್ಸಸ್ ಮಹಾದೇವ್ ಚಳವಳಿ ವ್ಯಾಪಕವಾಗಿ ಹಬ್ಬಿದರೆ ಕಷ್ಟವಾಗಬಹುದು. ಏಕೆಂದರೆ ಎರಡು ಸಂಘಟನೆಗಳಿಗೆ ಎಲ್ಲಿಂದಲೋ ಹಣದ ಹರಿವು ಪರೋಕ್ಷವಾಗಿ ಬರಬಹುದು. ಆಗ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟ.

ಇದು ಕೇವಲ ಹಿಂದೂ ಮುಸ್ಲಿಂ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆರ್ಯ – ದ್ರಾವಿಡ, ಸಂವಿಧಾನ – ಭಗವದ್ಗೀತೆ, ಮೀಸಲಾತಿ ಪರ – ವಿರೋಧ ಹೀಗೆ ನಾನಾ ವಿಷಯಗಳಿಗೆ ಹಬ್ಬಬಹುದು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ ಅವರು ಧಾರ್ಮಿಕ ವಿಷಯದಲ್ಲಿ ನಡೆಸುತ್ತಿರುವ ಅಕ್ರಮಣಕಾರಿ ಆಡಳಿತ, ಅದಕ್ಕೆ ವಿರುದ್ಧವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಷ್ಟೀಕರಣ ಆಡಳಿತ ಹೆಚ್ಚು ದುಷ್ಪರಿಣಾಮ ಬೀರಬಹುದು.

ಸಂವಿಧಾನದ ಆಶಯವಾದ ಸಂಯಮ ಮತ್ತು ಸಮನ್ವಯ ಹಾಗೂ ಜವಾಬ್ದಾರಿಯುತ ಆಡಳಿತ ನಡೆಸದಿದ್ದರೆ, ಚುನಾವಣಾ ರಾಜಕೀಯವೇ ಮುಖ್ಯವಾದರೆ ದೇಶದ ಪ್ರಕ್ಷುಬ್ಧ ವಾತಾವರಣ ಯಾವ ದಿಕ್ಕನ್ನು ಬೇಕಾದರೂ ಪಡೆಯಬಹುದು.

ಈ ನಿಟ್ಟಿನಲ್ಲಿ ಸಾಮಾನ್ಯ ಜನರಾದ ನಾವು ಎಚ್ಚರಿಕೆಯಿಂದ ಇರಬೇಕು. ಸಂಯಮ ಪ್ರದರ್ಶಿಸಬೇಕು. ಯಾವುದೇ ರೀತಿಯ ಗಲಭೆಗಳಿಗೆ ಪ್ರಚೋದನಾಕಾರಿಯಾಗಿ ವರ್ತಿಸದೆ ಮಾನವೀಯ ಚಿಂತನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಬೇಕು. ಆಗ ಮಾತ್ರ ಒಂದಷ್ಟು ನೆಮ್ಮದಿ ಕಾಣಲು ಸಾಧ್ಯ.

ಒಮ್ಮೆ ದೊಡ್ಡಮಟ್ಟದ ಘರ್ಷಣೆ ಪ್ರಾರಂಭವಾದರೆ ಆಗ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಆಗ ಪಶ್ಚಾತಾಪ ಪಟ್ಟರೆ ಪ್ರಯೋಜನವಿಲ್ಲ. ಶಾಂತಿಯ ಸಮಯದಲ್ಲಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಒಳಿತು. ಮಹಮದ್ ಮತ್ತು ಮಹದೇವ್ ಇಬ್ಬರೂ ನಮ್ಮವರೇ.

ಅವರ ನಡುವೆ ಭಿನ್ನತೆ ಕಾಣುವವರು ದೇಶ ವಿರೋಧಿಗಳು,
ಧರ್ಮ ವಿರೋಧಿಗಳು,
ಮಾನವ ವಿರೋಧಿಗಳು,
ಶಾಂತಿಯ ವಿರೋಧಿಗಳು ಮತ್ತು ಸಂವಿಧಾನ ವಿರೋಧಿಗಳು.
ನಾವು ಜೀವಪರ ನಿಲುವಿನ ಸರ್ವೇ ಜನೋ ಸುಖಿನೋ ಭವಂತು ಎನ್ನುತ್ತಾ
ಸಕಲ ಜೀವಾತ್ಮಗಳಿಗೆ ಲೇಸನೇ ಬಯಸುವವರು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068……

Related posts