ದೇವರಮಾದಹಳ್ಳಿಯಲ್ಲಿ ಮೂವರಿಂದ ವ್ಯಕ್ತಿಗೆ ಹಲ್ಲೆ – ಪ್ರಕರಣ ದಾಖಲಾದ ಹಿನ್ನೆಲೆ..
ನಾಗಮಂಗಲ ತಾಲೂಕಿನ ದೇವರಮಾದಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮೂವರು ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಸಂಭವಿಸಿದ್ದು, ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರೀಶ್ ಅವರ ಪ್ರಕಾರ, ಗಿರೀಶ್ ಟಿಟಿ ತಮ್ಮ ಪತ್ನಿ ದಿವ್ಯರಾಣಿ ಅವರು ತಮ್ಮ ತಂದೆಯ ಊರಾದ ದೇವರಮಾದಹಳ್ಳಿ ಗ್ರಾಮಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ದಿನಾಂಕ 29-09-2025 ರಂದು ರಾತ್ರಿ 8.15 ಗಂಟೆಯ ಸಮಯದಲ್ಲಿ ಬೈಕಿನಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ, ದೇವರಮಾದಹಳ್ಳಿ ಗ್ರಾಮದ ಹತ್ತಿರ ದೊಡ್ಡಶೆಟ್ಟಿ ಮಗ ದೊಡ್ಡಶೆಟ್ಟಿ (ದಲಾಳಿ), ಧನಂಜಯ ಬಿನ್ ದೊಡ್ಡಶೆಟ್ಟಿ, ಹಾಗೂ ಶೆಟ್ಟಿಹಳ್ಳಿಕೊಪ್ಪಲು ಗ್ರಾಮದ ನಾಗರಾಜು ಬಿನ್ ಬೋರಪ್ಪ ಎಂಬ ಮೂವರು ಸೇರಿಕೊಂಡು ಬೈಕನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ಬಳಿಕ ಆರೋಪಿತರು ಗಿರೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧನಂಜಯ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಗಿರೀಶ್ ಅವರ ಹಣೆ, ಮೂಗು ಹಾಗೂ ಎಡಕೈ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ. ನಾಗರಾಜು ದೊಣ್ಣೆಯಿಂದ ಗಿರೀಶ್ ಅವರ ಎಡಕೈ ಹಾಗೂ ಬಲಕಾಲಿಗೆ ಹೊಡೆದು ರಕ್ತ ಗಾಯ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲಿಯೇ ಇದ್ದ ಕೃಷ್ಣ, ಮಧು, ತಿಮ್ಮಪ್ಪ ಎಂಬ ಗ್ರಾಮಸ್ಥರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದರೆ, ಆರೋಪಿತರು ಸ್ಥಳ ತೊರೆದು ಹೋಗುವ ಮೊದಲು “ಮತ್ತೊಮ್ಮೆ ಈ ಊರಿಗೆ ಬಂದರೆ ಕೊಲೆ ಮಾಡುತ್ತೇವೆ” ಎಂದು ಗಿರೀಶ್ ಅವರಿಗೆ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿದೆ.
ಗಾಯಗೊಂಡ ಗಿರೀಶ್ ಅವರನು 108 ಅಂಬ್ಯುಲೆನ್ಸ್ ಮೂಲಕ ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬಿ.ಜಿ.ನಗರದ ಎ.ಸಿ.ಗಿರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಚೇತರಿಸಿಕೊಂಡ ಬಳಿಕ ಗಿರೀಶ್ ಅವರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ :
ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್.

