ಸುದ್ದಿ 

ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ..

Taluknewsmedia.com

ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ

ಜಮೀನು ಉಳುಮೆ ವಿಷಯದಲ್ಲಿ ಉಂಟಾದ ವಿವಾದದಿಂದ ಮೂವರು ಸೇರಿ ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಘಟನೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಶಂಕರಪ್ಪ ಅವರು ತಮ್ಮ ಊರಿನಲ್ಲಿ ವಾಸವಾಗಿದ್ದು, ಅಕ್ಟೋಬರ್ 1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೋರಪ್ಪನ ನಿಂಗಪ್ಪಣರವರ ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಆ ಸಮಯದಲ್ಲಿ ಗ್ರಾಮಸ್ಥರಾದ ಡಿ.ಬಿ. ಕುಮಾರ್ ಬಿನ್ ಬೋರೇಗೌಡ, ಅವರ ಮಗ ದಿನೇಶ್ ಕೆ., ಮತ್ತು ಪತ್ನಿ ಜಯಮ್ಮ ಎಂಬವರು ಶಂಕರಪ್ಪರೊಂದಿಗೆ ಜಮೀನು ಉಳುಮೆ ಕುರಿತಾಗಿ ಜಗಳಕ್ಕೆ ಇಳಿದಿದ್ದಾರೆ. ವಾಗ್ವಾದದ ವೇಳೆ ದಿನೇಶ್ ಶಂಕರಪ್ಪ ಅವರ ಮುಖ ಮತ್ತು ಕತ್ತಿನ ಮೇಲೆ ಕೈಯಿಂದ ಹೊಡೆದರೆ, ಕುಮಾರ್ ದೊಣ್ಣೆಯಿಂದ ಅವರ ಬೆನ್ನಿಗೆ ಹಾಗೂ ಕಾಲಿಗೆ ಹೊಡೆದಿದ್ದಾರೆ. ಜಯಮ್ಮರು ಶಂಕರಪ್ಪ ಅವರ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದು “ಇವನನ್ನು ಬಿಡಬೇಡಿ” ಎಂದು ತನ್ನ ಗಂಡ ಮತ್ತು ಮಗನಿಗೆ ಕುಮ್ಮಕ್ಕು ನೀಡಿದರು.

ನಂತರ ಆರೋಪಿಗಳು ಶಂಕರಪ್ಪರನ್ನು ನೆಲಕ್ಕೆ ಕೆಡವಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ. ಘಟನೆಯ ಸಮಯದಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಮಹೇಶ್ ಬಿನ್ ಮಾಯಣ ಮತ್ತು ಸುಧಾ ಸಿ ಕೋಂ ಹೊನ್ನೇಗೌಡ ಅವರು ಮಧ್ಯಪ್ರವೇಶ ಮಾಡಿ ಜಗಳವನ್ನು ಬಿಡಿಸಿ ಶಂಕರಪ್ಪ ಅವರನು ರಕ್ಷಿಸಿದ್ದಾರೆ.

ಆದರೂ ಆರೋಪಿಗಳು “ಈ ದಿನ ನೀನು ನಮ್ಮ ಕೈಯಿಂದ ಬಚಾವಾಗಿದ್ದೀಯಾ, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ.

ಗಾಯಗೊಂಡ ಶಂಕರಪ್ಪ ಅವರನು ಸ್ಥಳೀಯರು ಮೊದಲು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಬಳಿಕ ವೈದ್ಯರ ಸಲಹೆ ಮೇರೆಗೆ ಬಿ.ಜಿ.ನಗರದ ಎ.ಸಿ.ಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆಯ ನಂತರ ಗ್ರಾಮಸ್ಥರು ಪಂಚಾಯಿತಿಯಲ್ಲಿ ವಿವಾದ ಬಗೆಹರಿಸಲು ಪ್ರಯತ್ನಿಸಿದರೂ, ಆರೋಪಿಗಳು ಹಾಜರಾಗದೆ ಇರುವ ಹಿನ್ನೆಲೆಯಲ್ಲಿ ಶಂಕರಪ್ಪ ಅವರು ಅಕ್ಟೋಬರ್ 5ರಂದು ಮಧ್ಯಾಹ್ನ 12 ಗಂಟೆಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ.

ಪೊಲೀಸರು ಶಂಕರಪ್ಪರ ದೂರಿನ ಮೇರೆಗೆ ಕುಮಾರ್, ದಿನೇಶ್ ಮತ್ತು ಜಯಮ್ಮ ವಿರುದ್ಧ ಹಲ್ಲೆ, ನಿಂದನೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ವರದಿ :

ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್.

Related posts