ಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು
ಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು
ಬೆಂಗಳೂರು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ಸಾವು ಕಂಡಿದ್ದಾನೆ. ಈ ವೇಳೆ ಹೊಗೆಯಿಂದ ಉಸಿರುಗಟ್ಟಿ ಯುವತಿಯೂ ಸಾವನ್ನಪ್ಪಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ನಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಲಾಡ್ಜ್ನ ಒಂದು ರೂಮಿನಲ್ಲಿ ಗದಗ ಮೂಲದ ಯುವಕ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂಬ ಯುವತಿ ವಾಸಿಸುತ್ತಿದ್ದರು. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಸಮೀಪದ ಬಿಲ್ಡಿಂಗ್ ಸ್ಪಾದಲ್ಲಿ ಉದ್ಯೋಗದಲ್ಲಿದ್ದರು.
ಬೆಳಗಿನ ವೇಳೆ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ತುಂಬಿಕೊಂಡಿತ್ತು. ಹೊಗೆಯಿಂದ ಉಸಿರುಗಟ್ಟುತ್ತಿದ್ದ ಯುವತಿಯು ತಕ್ಷಣ ಲಾಡ್ಜ್ ಸಿಬ್ಬಂದಿಗೆ ಕರೆಮಾಡಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಬಾತ್ರೂಮ್ನೊಳಗಿದ್ದ ಯುವತಿ ಬಾಗಿಲು ಹಾಕಿಕೊಂಡಿದ್ದಳು.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬಾಗಿಲು ಒಡೆದು ಒಳ ಪ್ರವೇಶಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಯುವತಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿನ ನಿಖರ ಕಾರಣಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

