2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ
2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ
2025ನೇ ಸಾಲಿನ ಬಹುನಿರೀಕ್ಷಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 338 ಮಂದಿ ಮತ್ತು ಸಂಸ್ಥೆಗಳು ನಾಮನಿರ್ದೇಶಿತರಾಗಿದ್ದರು.
ಮಚಾಡೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉಳಿಸಲು ಹಾಗೂ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ ಶಾಂತಿಯುತ ಬದಲಾವಣೆಗಾಗಿ ನಡೆಸಿದ ಹೋರಾಟಕ್ಕೆ ಈ ಗೌರವ ದೊರೆತಿದೆ. ಪ್ರಶಸ್ತಿಯ ಮೊತ್ತ ಸುಮಾರು ₹10.38 ಕೋಟಿ ಆಗಿದೆ.
ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಕುರಿತು ಪ್ರಕಟಣೆ ನೀಡಿದ್ದು, “ಮಚಾಡೊ ಅವರು ಒಮ್ಮೆಗೆ ತೀವ್ರವಾಗಿ ವಿಭಜನೆಯಾಗಿದ್ದ ವಿರೋಧ ಪಕ್ಷಗಳಲ್ಲಿ ಸಾಮರಸ್ಯ ನಿರ್ಮಿಸಿ, ದೇಶದಲ್ಲಿ ಸ್ವತಂತ್ರ ಚುನಾವಣೆ ಮತ್ತು ಪ್ರಾತಿನಿಧಿಕ ಆಡಳಿತದ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರ ಈ ನಿರಂತರ ಪ್ರಯತ್ನಗಳು ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿವೆ” ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಪ್ರಶಸ್ತಿ ರೇಸ್‌ನಲ್ಲಿ ಹೆಸರು ಕೇಳಿಸಿಕೊಂಡಿದ್ದರೂ, ಸಮಿತಿಯು ವೆನೆಜುವೆಲಾದ ಜನರ ಹೋರಾಟ ಮತ್ತು ಮಚಾಡೊ ಅವರ ಶಾಂತಿಯುತ ಪ್ರಯತ್ನಗಳನ್ನು ಹೆಚ್ಚಿನ ಪ್ರಾಮುಖ್ಯತೆಯಿಂದ ಪರಿಗಣಿಸಿದೆ.
ಮಾರಿಯಾ ಕೊರಿನಾ ಮಚಾಡೊ ಯಾರು?
ವೆನೆಜುವೆಲಾದ ಪ್ರಮುಖ ರಾಜಕಾರಣಿ ಮತ್ತು ಕೈಗಾರಿಕಾ ಇಂಜಿನಿಯರ್ ಆಗಿರುವ ಮಚಾಡೊ ಅವರು, ಪ್ರಜಾಪ್ರಭುತ್ವ ಪರ ಚಳವಳಿಯ ಕೇಂದ್ರ ವ್ಯಕ್ತಿಗಳಲ್ಲಿ ಒಬ್ಬರು. ನಿಕೋಲಸ್ ಮಡುರೊ ಅವರ ದಬ್ಬಾಳಿಕೆಯ ಆಡಳಿತವನ್ನು ಹಲವು ವರ್ಷಗಳಿಂದ ಧಿಕ್ಕರಿಸುತ್ತಾ ಬಂದಿರುವ ಅವರು, ಬಂಧನ, ಬೆದರಿಕೆ ಹಾಗೂ ರಾಜಕೀಯ ಕಿರುಕುಳ ಎದುರಿಸಿದ್ದರೂ ಹಿಂಜರಿಯಲಿಲ್ಲ.
ಅವರ ಶಾಂತಿಯುತ ಪ್ರತಿರೋಧವು ಲಕ್ಷಾಂತರ ವೆನೆಜುವೆಲಾದ ಜನರಿಗೆ ಪ್ರೇರಣೆಯಾಗಿದೆ. 2011ರಿಂದ 2014ರವರೆಗೆ ಅವರು ರಾಷ್ಟ್ರೀಯ ವಿಧಾನಸಭೆಯ ಸದಸ್ಯೆಯಾಗಿದ್ದರು ಮತ್ತು ಪ್ರಸ್ತುತ ವಿರೋಧ ಪಕ್ಷದ ಪ್ರಮುಖ ಮುಖಂಡೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

