ಸುದ್ದಿ 

ಜಾತಿ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರಿಗೆ ನರಕಯಾತನೆ! ಆನೇಕಲ್‌ನಲ್ಲಿ ಶಿಕ್ಷಕಿಗೆ ಹೃದಯಾಘಾತ

Taluknewsmedia.com

ಜಾತಿ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರಿಗೆ ನರಕಯಾತನೆ! ಆನೇಕಲ್‌ನಲ್ಲಿ ಶಿಕ್ಷಕಿಗೆ ಹೃದಯಾಘಾತ

ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರನ್ನು ದಿನರಾತ್ರಿ ಓಡಿಸುತ್ತಿರುವ ಅಮಾನವೀಯ ಪರಿಸ್ಥಿತಿ ಬೆಳಕಿಗೆ ಬಂದಿದೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕಿ ಯಶೋಧ ಅವರಿಗೆ ಸಮೀಕ್ಷೆಯ ವೇಳೆ ಹೃದಯಾಘಾತ ಸಂಭವಿಸಿದೆ. ಊಟ–ನೀರು ಇಲ್ಲದೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ಶಿಕ್ಷಕಿಯನ್ನು ತುರ್ತುವಾಗಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದಾರೆ.

ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದರೂ ಸಮೀಕ್ಷೆ ಕಾರ್ಯವನ್ನು ಸರ್ಕಾರ ಬಲವಂತವಾಗಿ ಮುಂದುವರೆಸುತ್ತಿದೆ. ಶಾಲಾ ಶಿಕ್ಷಕರಿಗೆ ಅವರ ಮೂಲ ಬೋಧನಾ ಕಾರ್ಯವನ್ನು ಬಿಟ್ಟು ಮನೆ ಮನೆ ಓಡಾಡುವ ಸಮೀಕ್ಷೆ ಕಾರ್ಯವನ್ನು ನೀಡಿದ್ದು, ಇದರಿಂದ ಅವರು ತೀವ್ರ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬಿಸಿಲು, ಮಳೆ, ಧೂಳು, ದಾಹ – ಯಾವುದಕ್ಕೂ ವಿಶ್ರಾಂತಿ ಇಲ್ಲ. ಮಧ್ಯಾಹ್ನದ ಊಟ, ನೀರಿನ ಸೌಲಭ್ಯ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದಿದ್ದರೆ ನೋಟಿಸ್‌ ಹಾಗೂ ಅಮಾನತ್ತಿನ ಭೀತಿಯಲ್ಲಿ ಶಿಕ್ಷಕರು ನರಳುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿಕ್ಷಕರ ಆರೋಗ್ಯವೇ ಹಾಳಾಗುತ್ತಿದೆ ಎಂದು ಶಿಕ್ಷಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ಶಿಕ್ಷಕರ ಹಿತಾಸಕ್ತಿಯನ್ನು ಕಡೆಗಣಿಸಿ ಕೇವಲ ಅಂಕಿ-ಅಂಶಗಳ ಹೆಸರಿನಲ್ಲಿ ಅವರ ಜೀವನವನ್ನೇ ಪಣಕ್ಕಿಟ್ಟಿರುವ ಸರ್ಕಾರದ ಕ್ರಮವನ್ನು ಶಿಕ್ಷಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
“ಶಿಕ್ಷಕರ ಆರೋಗ್ಯಕ್ಕಿಂತ ಸರ್ಕಾರದ ಸಮೀಕ್ಷೆ ಮುಖ್ಯವೇ?” ಎಂಬ ಪ್ರಶ್ನೆ ಎಲ್ಲೆಡೆ ಮೊಳಗುತ್ತಿದೆ.

Related posts