ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!
ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!
ರಾಜ್ಯದಾದ್ಯಂತ ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಲೋಕಾಯುಕ್ತದ ಭಾರಿ ಆಪರೇಷನ್! ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೀದರ್, ಉತ್ತರ ಕನ್ನಡ ಮತ್ತು ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯ ನಡೆದಿದೆ.
ಬೆಂಗಳೂರು ನಗರದಲ್ಲಿ ಮೂರು ಕಡೆ ದಾಳಿ
ಬೆಂಗಳೂರು ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ 6 ಗಂಟೆಗೆ ಮೂವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಮೆಡಿಕಲ್ ಅಧಿಕಾರಿ ಮಂಜುನಾಥ್,
ಜಿ.ವಿ. ಪಿಯು ಬೋರ್ಡ್ ನಿರ್ದೇಶಕಿ ಸುಮಂಗಳ,
ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಇವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತದ ನಾಲ್ಕು ತಂಡಗಳು ಶೋಧ ನಡೆಸಿವೆ.
ಸುಮಂಗಳ ಅವರ ಮನೆಯಲ್ಲಿ ನಾಲ್ಕು ವಾಹನಗಳಲ್ಲಿ ಬಂದ ಸುಮಾರು ಹತ್ತು ಮಂದಿ ಲೋಕಾಯುಕ್ತ ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
“ಬೆಳಿಗ್ಗೆ 6 ಗಂಟೆಯಿಂದಲೇ ದಾಳಿ ಪ್ರಾರಂಭಿಸಿದೆವು. ಮಂಜುನಾಥ್ ಮತ್ತು ಸುಮಂಗಳ ಪ್ರಕರಣಗಳಲ್ಲಿ ಕ್ರಮವಾಗಿ 16 ಮತ್ತು 25 ಅಧಿಕಾರಿಗಳಿಂದ ಶೋಧ ನಡೆದಿದೆ. ದಾಖಲೆಗಳನ್ನು ಪಂಚರ ಸಮ್ಮುಖದಲ್ಲಿ ಸೀಜ್ ಮಾಡಲಾಗಿದೆ,” ಎಂದು ಎಸ್ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ದಾಳಿ
ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಹಾಗೂ ಪಿಐ ಮಂಜುನಾಥ್ ನೇತೃತ್ವದ ತಂಡ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಚಂದ್ರಕಾಂತ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ತರಳಬಾಳು ನಗರ ಹಾಗೂ ಹೊಳಲ್ಕೆರೆ ತಾಲೂಕಿನ ಟಿ ನುಲೇನೂರು ಗ್ರಾಮದ ಮನೆಗಳಲ್ಲಿ ದಾಖಲೆಗಳ ಶೋಧ ನಡೆದಿದೆ. ಅಧಿಕಾರಿಗಳಾದ ಚಂದ್ರಕಾಂತ್ ಅವರಿಗೂ ಸೇರಿದ ಎರಡು ಮನೆ ಹಾಗೂ ಕಚೇರಿಯಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗಲಕೋಟೆ ದಾಳಿ
ಆಲಮಟ್ಟಿ ಬಲದಂಡೆ ಯೋಜನೆಯ ಜೂನಿಯರ್ ಇಂಜಿನಿಯರ್ ಚೇತನ್ ಮಲಜಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ನವನಗರ ಸೆಕ್ಟರ್ ನಂ.16 ರಲ್ಲಿರುವ ಬೃಹತ್ ಮನೆಯಲ್ಲಿ ದಾಖಲೆಗಳ ಶೋಧ ನಡೆಯುತ್ತಿದೆ.
ಎಸ್ಪಿ ಟಿ. ಮಲ್ಲೇಶ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ 12 ಮಂದಿ ಅಧಿಕಾರಿಗಳು ಪಾಲ್ಗೊಂಡಿದ್ದು, ಕಮತಗಿ ಕಚೇರಿಯ ಮೇಲೂ ಶೋಧ ನಡೆದಿದೆ.
ದಾವಣಗೆರೆಯಲ್ಲಿ ಶಾಕ್ ದಾಳಿ
ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕೆಆರ್‌ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್‌ಡಿಎ ಮಧ್ಯಿನಮನೆ ಇವರ ಮನೆಗಳಲ್ಲಿ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆದಿದೆ.
ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿಯುತ್ತಿದೆ.
ಹಾವೇರಿಯಲ್ಲಿ ಎರಡು ಕಡೆ ಶೋಧ
ಹಾವೇರಿಯಲ್ಲೂ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ರಾಣೇಬೆನ್ನೂರಿನ ಕಂದಾಯ ನೀರೀಕ್ಷಕ ಅಶೋಕ್ ಅರಳೇಶ್ವರ, ಸವಣೂರು ತಾಲ್ಲೂಕು ಪಂಚಾಯತಿ ಇಓ ಬಸವೇಶ್ವರ ಶಿಡೇನೂರು ಇವರ ಮನೆ ಹಾಗೂ ಕಚೇರಿಗಳಲ್ಲಿ ಡಿಎಸ್‌ಪಿ ಮಧುಸೂದನ್ ನೇತೃತ್ವದ ತಂಡ ಶೋಧ ನಡೆಸಿದೆ.
ಬೀದರ್‌ನಲ್ಲಿ ಭಾರಿ ಶೋಧ
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಹೊಸಾಳೆ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಬೀದರ್, ಔರಾದ್, ಭಾಲ್ಕಿ ತಾಲೂಕುಗಳಲ್ಲಿನ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.
ಡಿವೈಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ದಾಖಲೆಗಳ ಪರಿಶೀಲನೆ ಜೊತೆಗೆ ಕೆಲವು ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಮತ್ತು ಉತ್ತರ ಕನ್ನಡ ದಾಳಿ
ಉಡುಪಿ ಆರ್‌ಟಿಓ ಅಧಿಕಾರಿ ಎಲ್.ಪಿ. ನಾಯ್ಕ್ ಮನೆ ಹಾಗೂ ಕಚೇರಿಗಳ ಮೇಲೂ ಶೋಧ ನಡೆದಿದೆ.
ಉಡುಪಿ ಮತ್ತು ಕುಮಟಾದ ಚಂದಾವರದಲ್ಲಿನ ಅವರ ಮನೆ, ಮೂಲ ಮನೆ ಹಾಗೂ ಸಂಬಂಧಿಕರ ಹೆಸರಿನಲ್ಲಿ ಕಟ್ಟಡಗಳ ದಾಖಲೆಗಳನ್ನು ಲೋಕಾಯುಕ್ತರು ಪರಿಶೀಲಿಸುತ್ತಿದ್ದಾರೆ.
ಇನ್ಸ್‌ಪೆಕ್ಟರ್ ವಿನಾಯಕ್ ಬಿಲ್ಲವ ನೇತೃತ್ವದಲ್ಲಿ ನಡೆದ ಶೋಧದಲ್ಲಿ ಬೃಹತ್ ಕಟ್ಟಡಗಳು, ಖಾಸಗಿ ಬಿಲ್ಡಿಂಗ್‌ಗಳ ದಾಖಲೆಗಳು ಪತ್ತೆಯಾಗಿವೆ.
ರಾಜ್ಯಾದ್ಯಂತ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಠಿಣ ಕ್ರಮ.. ರಾಜ್ಯಾದ್ಯಂತ ಇಂದು ನಡೆದ ಈ 12 ಜಿಲ್ಲೆಗಳ ದಾಳಿ ಭ್ರಷ್ಟಾಚಾರದ ವಿರುದ್ಧದ ಲೋಕಾಯುಕ್ತದ ಬೃಹತ್ ಕ್ಲೀನ್‌ಅಪ್ ಆಪರೇಷನ್ ಆಗಿದ್ದು, ಹಲವಾರು ಅಧಿಕಾರಿಗಳ ಅಕ್ರಮ ಆಸ್ತಿ ಮತ್ತು ದಾಖಲೆಗಳ ಪತ್ತೆ ನಡೆಯುತ್ತಿದೆ.
ಎಸ್ಪಿ, ಡಿವೈಎಸ್ಪಿ, ಇನ್ಸ್‌ಪೆಕ್ಟರ್ ಹಾಗೂ ಪಿಐ ಮಟ್ಟದ ಅಧಿಕಾರಿಗಳ ತಂಡಗಳು ಶೋಧ ಕಾರ್ಯ ಮುಂದುವರೆಸಿದ್ದು, ದಾಳಿಯು ಇನ್ನೂ ಕೆಲವು ಜಿಲ್ಲೆಗಳಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

