ಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್ – ಖರ್ಚಿನ ವಿವರ ಎಲ್ಲಿ?
ಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್ – ಖರ್ಚಿನ ವಿವರ ಎಲ್ಲಿ?
ಬೆಂಗಳೂರು ದಕ್ಷಿಣ ಸಂಸದರ ನಿಧಿ ಅಡಿಯಲ್ಲಿ, ಆಡುಗೋಡಿಯ ಸಿ.ಎ.ಆರ್ ದಕ್ಷಿಣ (ನಗರ ಮೀಸಲು ಪೊಲೀಸ್ ಪಡೆ) ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿಸಿರುವ ನೂತನ ಬ್ಯಾಡ್ಮಿಂಟನ್ ಕೋರ್ಟ್‌ಗೆ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಿತು. ಆದರೆ ಈ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ಖರ್ಚಾದ ಮೊತ್ತ, ಅದರ ವಿವರ ಹಾಗೂ ಪಾರದರ್ಶಕತೆ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂಬುದು ಪ್ರಶ್ನೆಗೆ ಕಾರಣವಾಗಿದೆ.
ಸಂಸದರ ನಿಧಿಯ ಅಡಿಯಲ್ಲಿ ನಡೆದ ಯೋಜನೆ ಎಂದು ಹೇಳಿಕೊಳ್ಳುವ ಈ ಕಾಮಗಾರಿಯು ಸಾರ್ವಜನಿಕ ಹಣದಿಂದ ನೇರವಾಗಿ ನಡೆಯುತ್ತಿರುವುದರಿಂದ, ಖರ್ಚು ಎಷ್ಟು? ಟೆಂಡರ್ ಪ್ರಕ್ರಿಯೆ ಹೇಗೆ? ಕಾಮಗಾರಿ ಯಾವ ಕಂಪನಿಗೆ ನೀಡಲಾಗಿದೆ? ಎಂಬ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದರಿಂದ ಸಂಶಯಗಳು ವ್ಯಕ್ತವಾಗಿವೆ.
ಈ ಸಂದರ್ಭದಲ್ಲಿ ಸಂಸದ ನಿಧಿಯಡಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರೂ, ಅವುಗಳ ನೈಜ ಪ್ರಯೋಜನ ಮತ್ತು ಪಾರದರ್ಶಕತೆಯ ಕುರಿತು ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್, ಉಪ ಪೊಲೀಸ್ ಆಯುಕ್ತರಾದ ಶ್ರೀ ಚನ್ನವೀರಪ್ಪ ಹಡಪದ, ಮಾಜಿ ಬಿಬಿಎಂಪಿ ಸದಸ್ಯೆ ಶ್ರೀಮತಿ ಸರಸ್ವತಮ್ಮ, ಬಿಜೆಪಿ ಮುಖಂಡರಾದ ಶ್ರೀ ಶ್ರೀಧರ್ ರೆಡ್ಡಿ, ಶ್ರೀ ಸುದರ್ಶನ್ ರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಜನರ ತೆರಿಗೆ ಹಣದಿಂದ ನಿರ್ಮಾಣವಾದ ಕ್ರೀಡಾ ಸೌಲಭ್ಯಗಳು ಕೆಲವೇ ವಲಯದವರಿಗೆ ಸೀಮಿತವಾಗದೇ, ಸಾಮಾನ್ಯ ನಾಗರಿಕರಿಗೂ ಉಪಯೋಗವಾಗಬೇಕು ಎಂಬುದು ನಾಗರಿಕರ ಬೇಡಿಕೆ. “ಖರ್ಚು ಎಷ್ಟು? ಪಾರದರ್ಶಕತೆ ಎಲ್ಲಿ?” ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

