ಹತ್ತಿ ಮಿಲ್‌ನಲ್ಲಿ 3 ಟನ್ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ!
ಹತ್ತಿ ಮಿಲ್‌ನಲ್ಲಿ 3 ಟನ್ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ!
ಯಾದಗಿರಿ: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಅಕ್ರಮ ಜಾಲ ಬಯಲಾಗುತ್ತಿದ್ದಂತೆಯೇ, ಇದೀಗ ಹತ್ತಿ ಮಿಲ್‌ನಲ್ಲಿಯೇ ಪಡಿತರ ಅಕ್ಕಿ ಅಡಗಿಸಿರುವುದು ಪತ್ತೆಯಾಗಿದೆ.
ಗುರುಮಠಕಲ್ ತಾಲ್ಲೂಕಿನ ಲಕ್ಷ್ಮೀ ತಿಮ್ಮಪ್ಪ ಹೆಸರಿನ ಕಾಟನ್ ಮಿಲ್‌ನ 2ನೇ ಗೋದಾಮಿನಲ್ಲಿ ಸುಮಾರು 3 ಟನ್ ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿದೆ. ಸಿಐಡಿ ತನಿಖಾ ತಂಡದವರು ಈ ಪತ್ತೆ ಮಾಡಿದ್ದಾರೆ.
ಹಿಂದಿನ ಸೆಪ್ಟೆಂಬರ್ 6ರಂದು ಗುರುಮಠಕಲ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್‌ಮಿಲ್‌ಗಳಲ್ಲಿ 3,985 ಕ್ವಿಂಟಾಲ್ ಅಕ್ರಮ ಅಕ್ಕಿ (₹1.21 ಕೋಟಿ ಮೌಲ್ಯ) ಪತ್ತೆಯಾಗಿತ್ತು. ಈ ಪ್ರಕರಣದ ಹಿನ್ನೆಲೆ ಸಿಐಡಿ ತಂಡ ತನಿಖೆಗೆ ತೆರಳಿತ್ತು.
ತನಿಖೆ ವೇಳೆ ಸಿಐಡಿ ಅಧಿಕಾರಿಗಳು ರೈಸ್‌ಮಿಲ್‌ನ ವೇ ಬ್ರಿಡ್ಜ್‌ಗೆ ಭೇಟಿ ನೀಡಿದಾಗ, ಹತ್ತಿರದಲ್ಲಿದ್ದ ಹತ್ತಿ ಮಿಲ್‌ನೊಳಗೂ ನುಗ್ಗಿ ಪರಿಶೀಲನೆ ನಡೆಸಿದರು. ಅಲ್ಲಿ ಅಕ್ಕಿ ಗೋಣಿಚೀಲಗಳಲ್ಲಿ ತುಂಬಿ ಸಂಗ್ರಹಿಸಲಾಗಿದ್ದದ್ದು ಪತ್ತೆಯಾಯಿತು.
ಕಳ್ಳಸಾಗಣೆದಾರರು ರೈಸ್‌ಮಿಲ್‌ಗಳಲ್ಲಿ ಅಕ್ಕಿ ಇಟ್ಟರೆ ದಾಳಿ ಸಮಯದಲ್ಲಿ ಸಿಕ್ಕಿಬೀಳುವ ಭೀತಿಯಿಂದ, ಅದನ್ನು ಹತ್ತಿ ಮಿಲ್ ಗೋದಾಮುಗಳಲ್ಲಿ ಅಡಗಿಸಿದ್ದರು ಎಂದು ಶಂಕಿಸಲಾಗಿದೆ.
ಸಿಐಡಿ ತನಿಖೆ:
ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ಹಾಗೂ ಎಸ್ಪಿ ಎಂ.ಡಿ. ಶರತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಳೆದ ಒಂದು ವಾರದಿಂದ ಗುರುಮಠಕಲ್‌ನಲ್ಲಿ ತನಿಖೆ ಮುಂದುವರೆಸಿದೆ. ತನಿಖಾಧಿಕಾರಿಗಳಾದ ಅನಿಲ್ ಮತ್ತು ಸಚಿನ್ ಸೇರಿದಂತೆ ಅಧಿಕಾರಿಗಳ ತಂಡ ಅಕ್ರಮದ ಮೂಲದವರೆಗೂ ತಲುಪಲು ಶೋಧ ನಡೆಸುತ್ತಿದೆ.

