ಸುದ್ದಿ 

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ!

Taluknewsmedia.com

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ!

ಹೆಚ್ಚು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿರ್ದೇಶಕ ಸಿಂಪಲ್ ಸುನಿ, ಇದೀಗ ತಮ್ಮ ಶಿಷ್ಯನಾದ ಶೀಲಮ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ಈಗ ಸುದ್ದಿಯಲ್ಲಿದೆ.

ಶೀಲಮ್, ಸುನಿಯ ನಿರ್ದೇಶನದ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ನಾಯಕನಾಗಿ ನಟಿಸುತ್ತಿರುವ ಅವರು, ಈ ಹಿಂದೆ ಕೆಲವು ಚಿತ್ರಗಳಲ್ಲಿ ಸಣ್ಣಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕನಸಿನ ನಾಯಕಪಾತ್ರದ ಮೂಲಕ ಅವರು ಹೊಸ ಹಾದಿ ಹಿಡಿದಿದ್ದಾರೆ.

ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಚಿತ್ರದಲ್ಲಿನ ಮೊದಲ ಹಾಡು “ನನ್ನೆದೆಯ ಹಾಡೊಂದನು” ಬಿಡುಗಡೆಯಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಶೀಲಮ್, ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನೃತ್ಯ ಮಾಡಿದ್ದಾರೆ.

ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, “ಚಿತ್ರದ ಕಥೆ ರಿವರ್ಸ್ ಸ್ಕ್ರೀನ್ ಪ್ಲೇ ಮಾದರಿಯಲ್ಲಿದೆ. ನಾವು ಜನವರಿ 9ರಂದು ಬಿಡುಗಡೆಯ ಮಾಡಲು ಉದ್ದೇಶಿಸಿದ್ದೇವೆ. ಈ ಪ್ರಚಾರ ಗೀತೆಯ ಯಶಸ್ಸಿಗೆ ಸಂಪೂರ್ಣ ಕ್ರೆಡಿಟ್ ತಂಡದ ಕಲಾವಿದರು, ತಾಂತ್ರಿಕರು ಹಾಗೂ ನಿರ್ಮಾಪಕರಿಗೆ ಸಲ್ಲುತ್ತದೆ. ಶೀಲಮ್ ಈ ಚಿತ್ರಕ್ಕಾಗಿ ಬಹಳ ಶ್ರಮಿಸಿದ್ದಾರೆ, ವಿಶೇಷವಾಗಿ ವರ್ಕೌಟ್ ಮತ್ತು ಅಭಿನಯದ ಮಟ್ಟದಲ್ಲಿ ಅವರ ನಿಷ್ಠೆ ಸ್ಪಷ್ಟವಾಗಿದೆ. ಮೋಕ್ಷಾ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ, ಸಾತ್ವಿಕಾ ಅದ್ಭುತವಾಗಿ ನಟಿಸಿದ್ದಾರೆ,” ಎಂದು ಹೇಳಿದರು.

ನಾಯಕ ಶೀಲಮ್ ತಮ್ಮ ಅನುಭವ ಹಂಚಿಕೊಂಡು, “ಈ ಹಾಡಿನ ಪ್ರತಿ ಕ್ಷಣ ನನ್ನ ಕನಸಿನ ಕ್ಷಣ. ನಾನು ಅತ್ಯುತ್ತಮ ಡ್ಯಾನ್ಸರ್ ಅಲ್ಲ, ಆದರೆ ಒಂದು ತಿಂಗಳ ಕಾಲ ತರಬೇತಿ ತೆಗೆದುಕೊಂಡೆ. ಈ ಪರ್ಫಾರ್ಮೆನ್ಸ್ ನನಗೆ ದೊಡ್ಡ ಸವಾಲಾಗಿತ್ತು,” ಎಂದರು.

ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಶೈಲಿಯ ಈ ಸಿನಿಮಾದ ಸಂಗೀತವನ್ನು ಜೂಡಾ ಸ್ಯಾಂಡಿ ಮತ್ತು ಜೇಡ್ ನೀಡಿದ್ದು, ಸಾಹಿತ್ಯವನ್ನು ಸಿಂಪಲ್ ಸುನಿ ಬರೆದಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಜೂಡಾ ಸ್ಯಾಂಡಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಮೆಲೋಡಿ ಗೀತೆ ಚಿತ್ರಕ್ಕೆ ವಿಶೇಷ ಮೆರಗು ನೀಡಿದೆ.

ಚಿತ್ರವನ್ನು ರಾಮ್ ಮೂವೀಸ್ ಸಂಸ್ಥೆ ನಿರ್ಮಿಸಿದ್ದು, ನಿರ್ಮಾಪಕರಾಗಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಕಾರ್ಯನಿರ್ವಹಿಸಿದ್ದಾರೆ. ಛಾಯಾಗ್ರಹಣವನ್ನು ಸಂತೋಷ್ ರೈ ಪಾತಾಜೆ ವಹಿಸಿದ್ದು, ಸಂಕಲನ ಆದಿತ್ಯ ಕಶ್ಯಪ್ ಅವರದು.

Related posts