ಸುದ್ದಿ 

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ?

Taluknewsmedia.com

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ?

ಬೆಂಗಳೂರು ನಗರದಲ್ಲಿ ನಿಗೂಢ ಸಾವಿನ ಘಟನೆ ಬೆಳಕಿಗೆ ಬಂದಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಪುತ್ತೂರು ಮೂಲದ 20 ವರ್ಷದ ಯುವಕ ತಕ್ಷಿತ್ ಶವವಾಗಿ ಪತ್ತೆಯಾದ ಘಟನೆ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿ ಪ್ರಕಾರ, ತಕ್ಷಿತ್ ಅಕ್ಟೋಬರ್ 9ರಂದು ವಿರಾಜಪೇಟೆಯ ಯುವತಿಯೊಂದಿಗಿದ್ದು, ಲಾಡ್ಜ್‌ನಲ್ಲಿ ರೂಮ್ ಮಾಡಿದ್ದ. ಇಬ್ಬರೂ ಹಿಂದೆ ಪಣಂಬೂರಿನ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದರು. ಆದರೆ ಬ್ಯಾಕ್‌ಲಾಗ್‌ಗಳಿಂದಾಗಿ ಕಾಲೇಜು ಬಿಟ್ಟು ಹೊರ ಬಂದಿದ್ದರು. ಬಳಿಕ ತಕ್ಷಿತ್ ಮೈಸೂರಿಗೆ ಓದಲು ಹೋಗುತ್ತಿದ್ದೇನೆಂದು ಹೇಳಿ, ವಾಸ್ತವದಲ್ಲಿ ಬೆಂಗಳೂರಿಗೆ ಬಂದಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಲಾಡ್ಜ್ ದಾಖಲೆ ಪ್ರಕಾರ, ತಕ್ಷಿತ್ ಮತ್ತು ಯುವತಿ ಕಳೆದ 8 ದಿನಗಳಿಂದ ರೂಮಿನಲ್ಲೇ ಇದ್ದು, ಸ್ವಿಗ್ಗಿ ಮೂಲಕ ಆಹಾರ ಪಾರ್ಸೆಲ್ ಮಾಡಿ ಸೇವಿಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಆಹಾರ ಸೇವಿಸಿದ ನಂತರ ತಕ್ಷಣ ಅಸ್ವಸ್ಥರಾಗಿದ್ದು, ಮೆಡಿಕಲ್ ಸ್ಟೋರ್‌ನಿಂದ ಮಾತ್ರೆ ತಂದು ಸೇವಿಸಿದ್ದರು. ಬಳಿಕ ಆ ಯುವತಿ ಸೈಲೆಂಟ್ ಆಗಿ ರೂಮ್ ಬಿಟ್ಟು ತನ್ನ ಊರಿಗೆ ತೆರಳಿದ್ದಾಳೆ ಎನ್ನಲಾಗಿದೆ.

ನಿನ್ನೆ ತಡರಾತ್ರಿ ಲಾಡ್ಜ್ ಸಿಬ್ಬಂದಿ ರೂಮಿನ ಬಾಗಿಲು ತಟ್ಟಿದಾಗ ಪ್ರತಿಕ್ರಿಯೆ ಸಿಗದ ಕಾರಣ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆಯಲಾಯಿತು. ಅಲ್ಲಿ ತಕ್ಷಿತ್ ಮಲಗಿದ್ದಲ್ಲೇ ಮೃತ ಸ್ಥಿತಿಯಲ್ಲಿ ಪತ್ತೆಯಾದನು. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಪಡಿಸಿಕೊಂಡು ಪೋಸ್ಟ್‌ಮಾರ್ಟಂಗಾಗಿ ಕಳುಹಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆಹಾರ ವಿಷದಿಂದ ಸಾವಿನ ಸಾಧ್ಯತೆಗಳನ್ನೂ ಪೊಲೀಸರು ಪರಿಗಣಿಸಿದ್ದಾರೆ. ಆದರೆ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿಯೂ ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ.

ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related posts