ಸುದ್ದಿ 

ಪತ್ನಿ ಕೊಲೆ ಪ್ರಕರಣ – ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕೃತ್ಯ ಬಯಲು!

Taluknewsmedia.com

ಪತ್ನಿ ಕೊಲೆ ಪ್ರಕರಣ – ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕೃತ್ಯ ಬಯಲು!

ಬೆಂಗಳೂರು ನಗರದ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ಕೃತ್ಯ ಮರೆಮಾಚಲು “ವಿದ್ಯುತ್ ಶಾಕ್‌ನಿಂದ ಸಾವು” ಎಂದು ನಾಟಕವಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತಳು ರೇಷ್ಮಾ (32), ಆರೋಪಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತ. ರೇಷ್ಮಾ ಸಹೋದರಿ ರೇಣುಕಾ ನೀಡಿದ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದಾರೆ.

ಮರಗೊಂಡಹಳ್ಳಿ ನಿವಾಸಿ ರೇಷ್ಮಾ ಅವರು 15 ವರ್ಷಗಳ ಹಿಂದೆ ಸುರೇಂದ್ರ ಎಂಬುವರನ್ನು ವಿವಾಹವಾಗಿದ್ದರು. ಆದರೆ ಮೊದಲ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರಿಗೆ 15 ವರ್ಷದ ಮಗಳು ಇದ್ದಾಳೆ. ಬಳಿಕ 9 ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಪ್ರಶಾಂತ್ ಕಮ್ಮಾರ್ ಎಂಬಾತನ ಪರಿಚಯವಾಗಿ, ಇಬ್ಬರು ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು. ಪ್ರಶಾಂತ್ ಎಲೆಕ್ಟ್ರಿಷಿಯನ್ ಆಗಿ ಹೆಬ್ಬಗೋಡಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾದ ನಂತರ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರೂ, ಕಳೆದ ಕೆಲವು ತಿಂಗಳಿಂದ ಪತ್ನಿಗೆ ಬೇರೆ ಸಂಬಂಧ ಇದೆ ಎಂಬ ಅನುಮಾನದಿಂದ ಪ್ರಶಾಂತ್ ಆಗಾಗ ಗಲಾಟೆ ಮಾಡುತ್ತಿದ್ದನೆಂದು ಮಾಹಿತಿ ದೊರೆತಿದೆ.

ಅಕ್ಟೋಬರ್ 15ರಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಸಂಜೆ ಶಾಲೆಯಿಂದ ಮನೆಗೆ ಬಂದ ಮಗಳು ಬಾತ್ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ತೆರೆಯುತ್ತಿದ್ದಂತೆ ತಾಯಿ ರೇಷ್ಮಾ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಆತಂಕಗೊಂಡಳು. ತಕ್ಷಣ ದೊಡ್ಡಮ್ಮ ರೇಣುಕಾಳಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ರೇಷ್ಮಾ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಆರೋಪಿ ಪ್ರಶಾಂತ್ ಆರಂಭದಲ್ಲಿ “ಸ್ನಾನಕ್ಕೆ ವಾಟರ್ ಹೀಟರ್ ಹಾಕಿದ್ದೆ, ಕರೆಂಟ್ ಹೊಡೆದು ಮೃತಪಟ್ಟಿರಬಹುದು” ಎಂದು ನಾಟಕವಾಡಿದ್ದ. ಆದರೆ ಮಗಳ ಹೇಳಿಕೆಯಲ್ಲಿ “ಅಪ್ಪ ಮತ್ತು ಅಮ್ಮ ಜಗಳ ಮಾಡಿಕೊಂಡಿದ್ದರು” ಎಂಬ ಮಾಹಿತಿ ದೊರಕಿದ ನಂತರ ಪೊಲೀಸರು ಅನುಮಾನಗೊಂಡು ವಿಚಾರಣೆ ಆರಂಭಿಸಿದರು.

ಆರೋಪಿಯನ್ನು ಕಠಿಣ ವಿಚಾರಣೆಗೆ ಒಳಪಡಿಸಿದಾಗ ಆತ ಕೊನೆಗೆ ಅಪರಾಧ ಒಪ್ಪಿಕೊಂಡಿದ್ದಾನೆ.

“ನನ್ನ ಹೆಂಡತಿಗೆ ಬೇರೆ ಗಂಡಸಿನೊಂದಿಗೆ ಸಂಬಂಧ ಇದೆ ಎಂದು ಶಂಕಿಸಿದ್ದೆ. ಹೀಗಾಗಿ ಆಕೆಯ ಕೆನ್ನೆಗೆ ಹೊಡೆದು, ಬಳಿಕ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದೆ. ನಂತರ ಕೃತ್ಯ ಮರೆಮಾಚಲು ಮೃತದೇಹವನ್ನು ಬಾತ್ರೂಮ್ನಲ್ಲಿ ಇರಿಸಿ ಬಕೆಟ್‌ನಲ್ಲಿ ನೀರು ಹಾಕಿ ವಾಟರ್ ಹೀಟರ್ ಆನ್ ಮಾಡಿ ಕರೆಂಟ್ ಶಾಕ್‌ನಿಂದ ಸಾವಾಗಿದೆ ಎಂದು ತೋರಿಸಿದ್ದೆ,” ಎಂದು ಪ್ರಶಾಂತ್ ಪೊಲೀಸರಿಗೆ ಹೇಳಿಕೊಂಡಿದ್ದಾನೆ.

ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Related posts