ಸುದ್ದಿ 

ಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ

Taluknewsmedia.com

ಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ

ನಗರದ ರಸ್ತೆ ಕಾಮಗಾರಿಗಳು ಕಂದಕಗಳಂತಿರುವಾಗ, ಸರ್ಕಾರ ಮತ್ತೊಂದು ಶೋ ಪೀಸ್ ಭೂಮಿಪೂಜೆ ನಡೆಸಿ ಜನರ ಕೋಪಕ್ಕೆ ಗುರಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಿವಿಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಆದರೆ ಜನರ ಪ್ರಶ್ನೆ — ಭೂಮಿಪೂಜೆ ಮಾತ್ರ ಬೇಕೆ, ಕೆಲಸ ಯಾವಾಗ?

ಹಿಂದಿನ ಕಾಮಗಾರಿಗಳು ಅರ್ಧದಲ್ಲೇ ಬಿಟ್ಟಿರುವಾಗ ಮತ್ತೆ ಹೊಸ ಕಾಮಗಾರಿಗಳ ಘೋಷಣೆ ಮಾಡುವುದು ನಿಜಕ್ಕೂ ಆಡಂಬರದ ರಾಜಕೀಯ ಎಂದು ನಾಗರಿಕರು ಕಿಡಿ ಕಾರಿದ್ದಾರೆ. ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಯೋಜನೆಗಳು ಅಸಮರ್ಪಕ ಯೋಜನೆ, ಅಸಮರ್ಪಕ ಗುಣಮಟ್ಟ ಮತ್ತು ಅನಾವಶ್ಯಕ ವಿಳಂಬಕ್ಕೆ ಪ್ರಸಿದ್ಧ.

ಹಿಂದಿನ ವರ್ಷವೇ ಹಲವು ಪ್ರದೇಶಗಳಲ್ಲಿ ಕಾಮಗಾರಿ ಮಧ್ಯೆ ನಿಂತು, ಜನರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ವ್ಯಾಪಾರಿಗಳು ನಷ್ಟ ಕಂಡಿದ್ದರು, ವಾಹನ ಸವಾರರು ದಿನಾಲು ಧೂಳಿನಲ್ಲಿ ಮುಳುಗಿದ್ದರು. ಈಗ ಮತ್ತೆ ಅದೇ ನಾಟಕ ಮತ್ತೆ ಅದೇ ಭರವಸೆ!

ನಗರದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ :

“ಫೋಟೋ ಸೆಷನ್ ಗೆ ಸಿಎಂ-ಡಿಸಿಎಂ ಬರುತ್ತಾರೆ, ಆದರೆ ಕಾಮಗಾರಿ ಪೂರ್ಣಗೊಳ್ಳುವಾಗ ಯಾರೂ ಕಾಣಿಸುತ್ತಿಲ್ಲ” ಎಂದು ಒಬ್ಬರು ಕಟುವಾಗಿ ಬರೆದಿದ್ದಾರೆ.

ಸರ್ಕಾರ ಘೋಷಿಸಿರುವ ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಹೆಸರಿನಲ್ಲಿ ನಡೆಯುತ್ತಿರುವ ಈ ಕಾಮಗಾರಿಗಳು ನಿಜಕ್ಕೂ ಸ್ಮಾರ್ಟ್ ಆಗಿರಬೇಕೋ, ಅಥವಾ ಕೇವಲ ರಾಜಕೀಯ ಪ್ರದರ್ಶನವಾಗಬೇಕೋ ಎಂಬ ಪ್ರಶ್ನೆ ಇದೀಗ ಎದ್ದಿದೆ.

ನಗರದ ಜನರು ಸ್ಪಷ್ಟವಾಗಿ ಹೇಳುತ್ತಿದ್ದಾರೆ —
“ನಮಗೆ ಭೂಮಿಪೂಜೆ ಬೇಡ, ನಮಗೆ ಪೂರ್ತಿಯಾದ ರಸ್ತೆ ಬೇಕು!”

Related posts