ಸುದ್ದಿ 

ಓಲಾ ಎಲೆಕ್ಟ್ರಿಕ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಸಿಇಒ ಭವೀಶ್ ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್!

Taluknewsmedia.com

ಓಲಾ ಎಲೆಕ್ಟ್ರಿಕ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ
ಸಿಇಒ ಭವೀಶ್ ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್!

ದೇಶದ ಪ್ರಮುಖ ಇ–ವಾಹನ ತಯಾರಿಕಾ ಸಂಸ್ಥೆ ಓಲಾ ಎಲೆಕ್ಟ್ರಿಕ್ ಕಂಪನಿಯೊಳಗೆ ಸಂಭವಿಸಿದ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣ ಇದೀಗ ಕಂಪನಿ ಉನ್ನತ ಮಟ್ಟದವರನ್ನೇ ಕಾನೂನು ಬಲೆಯೊಳಗೆ ಎಳೆದುಕೊಂಡಿದೆ. ಈ ಘಟನೆಯಲ್ಲಿ ಸಿಇಒ ಭವೀಶ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ…
ಬೆಂಗಳೂರಿನ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ. ಅರವಿಂದ್ (35) ಅವರು ಸೆಪ್ಟೆಂಬರ್ 28ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾರಂಭದಲ್ಲಿ ಪೊಲೀಸರು ಇದನ್ನು ಯುಡಿಆರ್ (Unnatural Death Report) ಪ್ರಕರಣವೆಂದು ದಾಖಲಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಬೆಳಕಿಗೆ ಬಂದ ಕೆಲವು ವಿಚಾರಗಳು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿವೆ.

ಅನುಮಾನ ಹುಟ್ಟಿಸಿದ ಹಣ ವರ್ಗಾವಣೆ…
ಅರವಿಂದ್ ಸಾವಿನ ಕೇವಲ ಎರಡು ದಿನಗಳ ಬಳಿಕ ಅವರ ಬ್ಯಾಂಕ್ ಖಾತೆಗೆ ₹17.46 ಲಕ್ಷ ಹಣ ಕಂಪನಿಯಿಂದ ಜಮೆಯಾದುದು ಕುಟುಂಬದ ಅನುಮಾನಕ್ಕೆ ಕಾರಣವಾಯಿತು. ವಿಚಾರಣೆ ವೇಳೆ ಕಂಪನಿ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ದೊರಕದೇ ಕುಟುಂಬದವರು ಮನೆಯಲ್ಲಿ ಪರಿಶೀಲನೆ ನಡೆಸಿ 28 ಪುಟಗಳ ಡೆತ್ ನೋಟ್ ಪತ್ತೆಹಚ್ಚಿದರು.

ಡೆತ್ ನೋಟ್‌ನ ವಿಷಯ..
ಅರವಿಂದ್ ಬರೆದಿದ್ದ ಡೆತ್ ನೋಟ್‌ನಲ್ಲಿ,
“ಕಂಪನಿಯ ಉನ್ನತ ಅಧಿಕಾರಿಗಳು : ಸಿಇಒ ಭವೀಶ್ ಅಗರ್ವಾಲ್ ಮತ್ತು ಸುಬ್ರತ್ ಕುಮಾರ್ ದಾಸ್ — ನಿರಂತರ ಕೆಲಸದ ಒತ್ತಡ, ಭತ್ಯೆ ಮತ್ತು ವೇತನ ನೀಡದ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ.”
ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನು ಕ್ರಮ ಆರಂಭ….
ಅರವಿಂದ್ ಕುಟುಂಬದವರು ಸಲ್ಲಿಸಿದ ದೂರು ಆಧಾರದಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಭ. ಅಗರ್ವಾಲ್, ಸುಬ್ರತ್ ಕುಮಾರ್ ದಾಸ್ ಹಾಗೂ ಓಲಾ ಎಲೆಕ್ಟ್ರಿಕ್ ಕಂಪನಿಯನ್ನೇ ಆರೋಪಿಗಳೆಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕುಟುಂಬದ ಆಕ್ರೋಶ..
ಅರವಿಂದ್ ಕುಟುಂಬದವರು ಹೇಳಿದ್ದಾರೆ :
“ಕಂಪನಿಯೊಳಗಿನ ನಿರಂತರ ಒತ್ತಡದಿಂದ ಅರವಿಂದ್ ಜೀವ ತ್ಯಜಿಸಿದರು. ಕಂಪನಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”

ಕಂಪನಿಯ ಪ್ರತಿಕ್ರಿಯೆ?…
ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಸಂಸ್ಥೆಯು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮೂಲಗಳ ಪ್ರಕಾರ, ಕಂಪನಿ ಆಂತರಿಕ ತನಿಖೆ ಪ್ರಾರಂಭಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ತನಿಖೆ ಮುಂದುವರಿಕೆ…
ಪೊಲೀಸರು ಈಗ ಡೆತ್ ನೋಟ್‌ನ ಹಸ್ತಾಕ್ಷರ ಪರಿಶೀಲನೆ, ಬ್ಯಾಂಕ್ ವಹಿವಾಟು ದಾಖಲೆಗಳು, ಹಾಗೂ ಕಂಪನಿ ಇಮೇಲ್ ಸಂವಹನಗಳು ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳನ್ನೂ ಸಂಗ್ರಹಿಸುತ್ತಿದ್ದಾರೆ. ಪ್ರಕರಣ ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಕಾರ್ಯಪದ್ದತಿಯ ಮೇಲೂ ಬೆಳಕು ಚೆಲ್ಲುವ ಸಾಧ್ಯತೆ ಇದೆ.

Related posts