ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ
ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ.
ಯಾದಗಿರಿ: ಪತ್ನಿಯು ತವರು ಮನೆಯಿಂದ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಸುರಪುರ ತಾಲೂಕಿನ ಡೋಣಿಗೇರಾದಲ್ಲಿ ನಡೆದಿದೆ. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸ್ವಯಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಮೃತ ಮಹಿಳೆಯನ್ನು ಮರಿಯಮ್ಮ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸಂಗಪ್ಪ (40) ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿ. ಕಳೆದ ಕೆಲವು ತಿಂಗಳಿನಿಂದ ದಂಪತಿಗಳ ನಡುವೆ ಅನೇಕ ಗಲಾಟೆಗಳು ನಡೆಯುತ್ತಿದ್ದವು. ಇದರಿಂದ ಬೇಸತ್ತ ಮರಿಯಮ್ಮ ತವರು ಮನೆಗೆ ತೆರಳಿ ಅಲ್ಲೇ ವಾಸಿಸುತ್ತಿದ್ದಳು.
ಶನಿವಾರ ರಾತ್ರಿ ಸಂಗಪ್ಪ ಪತ್ನಿಯನ್ನು ಮನೆಗೆ ಕರೆತರಲು ಡೋಣಿಗೇರಾದ ಆಕೆಯ ತವರು ಮನೆಗೆ ಹೋಗಿದ್ದಾನೆ. ಆದರೆ ಮರಿಯಮ್ಮ ಗಂಡನ ಮನೆಗೆ ಹಿಂತಿರುಗಲು ನಿರಾಕರಿಸಿದ್ದಾಳೆ. ಮಾತಿನ ಜಟಾಪಟಿಯು ತೀವ್ರಗೊಂಡ ಪರಿಣಾಮ ಕೋಪದ ಜ್ವಾಲೆಯಲ್ಲಿ ಸಂಗಪ್ಪ ಮನೆಯಲ್ಲಿ ಇದ್ದ ಮಚ್ಚಿನಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ತಲೆಗೆ ಬಿದ್ದ ಭಾರೀ ಹೊಡೆತದಿಂದ ಮರಿಯಮ್ಮ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ಘಟನೆಯ ನಂತರ ಸಂಗಪ್ಪ ನೇರವಾಗಿ ಸುರಪುರ ಪೊಲೀಸ್ ಠಾಣೆಗೆ ತೆರಳಿ “ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ” ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುರಪುರ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

