ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರ ದುರ್ಮರಣ
ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರ ದುರ್ಮರಣ
ದೀಪಾವಳಿ ಸಂಭ್ರಮದಲ್ಲಿ ದುರಂತ — ಹಾವೇರಿ ಜಿಲ್ಲೆಯ ವಿವಿಧೆಡೆ ಹೋರಿ ಹಾವಳಿ ಮೂವರ ಜೀವ ಬಲಿ
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾವೇರಿ ಜಿಲ್ಲೆಯ ಹಲವು ಭಾಗಗಳಲ್ಲಿ ದುರಂತಕ್ಕೆ ಕಾರಣವಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಯುವಕನೊಬ್ಬನನ್ನು ಸೇರಿಸಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರಾಗಿ ಗುರುತಿಸಲಾದವರು — ಚಂದ್ರಶೇಖರ ಕೋಡಿಹಳ್ಳಿ (75), ಘನಿಸಾಬ್ (75) ಹಾಗೂ ಭರತ್ (22). ಮೃತರ ಪೈಕಿ ಇಬ್ಬರು ನಿನ್ನೆ ಮೃತಪಟ್ಟಿದ್ದು, ಇಂದು ಬೆಳಿಗ್ಗೆ ನಡೆದ ಅಪಘಾತದಲ್ಲಿ ಮತ್ತೊಬ್ಬ ಯುವಕ ಮೃತಪಟ್ಟಿದ್ದಾನೆ.
ಹಾವೇರಿ ತಾಲ್ಲೂಕಿನ ದಾನೇಶ್ವರಿ ನಗರದ ನಿವಾಸಿ, ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳ್ಳಿ ಅವರು ಮನೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಹೋರಿ ಹಾಯ್ದು ಗಂಭೀರವಾಗಿ ಗಾಯಗೊಳಿಸಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಪ್ರಾಣ ಕಳೆದುಕೊಂಡರು.
ಇನ್ನೊಂದು ಘಟನೆಯಲ್ಲಿ, ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಹೋರಿ ಹಬ್ಬ ವೀಕ್ಷಿಸಲು ಬಂದಿದ್ದ ಭರತ್ (22) ಎಂಬ ಯುವಕನನ್ನು ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಮತ್ತೊಂದು ಘಟನೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ದಾಖಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಪರಿಣಾಮ ದೇವಿಹೊಸೂರು ಗ್ರಾಮದ ಘನಿಸಾಬ್ (75) ಮನೆ ಕಟ್ಟೆಯ ಮೇಲೆ ಕುಳಿತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಘಟನೆಗಳ ಹಿನ್ನೆಲೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಸ್ಥಳೀಯರು ಹಬ್ಬದ ಸಂದರ್ಭಗಳಲ್ಲಿ ಸುರಕ್ಷತಾ ಕ್ರಮ ಕಟ್ಟು ನಿಟ್ಟಾಗಿರಬೇಕೆಂದು ಆಗ್ರಹಿಸಿದ್ದಾರೆ.

