ಸಿನೆಮಾ ಸುದ್ದಿ 

“ಫಸ್ಟ್ ಸ್ಯಾಲರಿ” – ತಾಯಿಯ ಕನಸುಗಳ ಹಾದಿಯಲ್ಲೊಂದು ಮನಮೋಹಕ ಕಿರುಚಿತ್ರ!

Taluknewsmedia.com

“ಫಸ್ಟ್ ಸ್ಯಾಲರಿ” – ತಾಯಿಯ ಕನಸುಗಳ ಹಾದಿಯಲ್ಲೊಂದು ಮನಮೋಹಕ ಕಿರುಚಿತ್ರ!

ಕನ್ನಡ ಚಿತ್ರರಂಗದಲ್ಲಿ ಪ್ರಚಾರದ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು ಗಳಿಸಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ. ಸುಧೀಂದ್ರ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ “ಒಲವಿನ ಉಡುಗೊರೆ”, “ಗಣೇಶನ ಮದುವೆ”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ನಗು ನಗುತಾ ನಲಿ” ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ್ದರು.

ಈಗ ಇದೇ ಸಂಸ್ಥೆಯ ಮುಂದಾಳತ್ವ ವಹಿಸಿರುವ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶನದ “ಫಸ್ಟ್ ಸ್ಯಾಲರಿ” (First Salary) ಎಂಬ ಕಿರುಚಿತ್ರಕ್ಕೆ ಬಂಡವಾಳ ಹೂಡಿ ಆಶೀರ್ವಾದ ನೀಡಿದ್ದಾರೆ. “ಕನಸುಗಳ ಹಾದಿ” ಎಂಬ ಅಡಿಬರಹದೊಂದಿಗೆ ಈ ಚಿತ್ರದ ಪೋಸ್ಟರ್ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದೆ.

ಕರೋನ ಸಮಯದಲ್ಲಿ “ಕರಾಳ ರೋಗ ನಾಶ” ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಸಿನಿರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದ ಪವನ್ ವೆಂಕಟೇಶ್, ಈಗ ತಮ್ಮ ಹೊಸ ಪ್ರಯತ್ನವಾದ “ಫಸ್ಟ್ ಸ್ಯಾಲರಿ” ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ.

ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದರಾದ ಹರಿಣಿ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿದ್ದು, ವಿಜಯ್ ಶಿವಕುಮಾರ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ಮತ್ತು ರಕ್ಷಿತ್ ಸೇರಿದಂತೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.

“ಫಸ್ಟ್ ಸ್ಯಾಲರಿ” ಚಿತ್ರವು ತಾಯಿಯ ಸೆಂಟಿಮೆಂಟ್ ಆಧರಿತ ಮನಕಲಕುವ ಕಥೆಯನ್ನು ಒಳಗೊಂಡಿದ್ದು, ಬೆಂಗಳೂರಿನಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಸುಮಾರು ಒಂದು ತಿಂಗಳು ತೆಗೆದುಕೊಂಡಿದ್ದು, ಚಿತ್ರದ ಒಟ್ಟಾರೆ ಅವಧಿ 24 ನಿಮಿಷಗಳಾಗಿದೆ. ಚಿತ್ರದಲ್ಲಿ ಒಂದು ಸುಂದರ ಹಾಡು ಕೂಡ ಇದೆ.

ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್, ಹೆಚ್.ಎನ್. ರವಿ ಸಾಸನೂರು ಕೆಲಸ ಮಾಡಿದ್ದು, ಪ್ರಚಾರ ಕಲೆಯನ್ನು ಮಣಿ ವಿನ್ಯಾಸಗೊಳಿಸಿದ್ದಾರೆ. ಕಥೆ ಮತ್ತು ಸಂಭಾಷಣೆ ವಿಜಯ್ ಶಿವಕುಮಾರ್, ಛಾಯಾಗ್ರಹಣ ಹಾಗೂ ಸಂಕಲನ ರಿಚರ್ಡ್ ಡ್ಯಾನಿಯಲ್, ಸಂಗೀತ ವಿಜಯ್ ಹರಿತ್ಸ, ಪತ್ರಿಕಾ ಸಂಪರ್ಕ ಡಿ.ಎಸ್. ಸುನೀಲ್ ಸುಧೀಂದ್ರ ಮತ್ತು ಡಿ.ಜಿ. ವಾಸುದೇವ್, ಡಿಜಿಟಲ್ ಮಾರ್ಕೆಟಿಂಗ್ ವಿಭಾಗವನ್ನು ಚಂದನ ಪ್ರಸನ್ನ ನಿರ್ವಹಿಸಿದ್ದಾರೆ.

ಶೀಘ್ರದಲ್ಲೇ “ಫಸ್ಟ್ ಸ್ಯಾಲರಿ” ಕಿರುಚಿತ್ರವು ಶ್ರೀ ರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರ ಹೃದಯಕ್ಕೆ ತಟ್ಟುವ ಭಾವನಾತ್ಮಕ ಕಥಾಹಂದರದ ಚಿತ್ರವಾಗಲಿದೆ.

Related posts