ಸುದ್ದಿ 

ಆಳಂದ ಮತ ಕಳ್ಳತನ ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಬಳಿ ಸುಟ್ಟ ದಾಖಲೆ ಪತ್ತೆ

Taluknewsmedia.com

ಆಳಂದ ಮತ ಕಳ್ಳತನ ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಬಳಿ ಸುಟ್ಟ ದಾಖಲೆ ಪತ್ತೆ

ಕಲಬುರಗಿ: ಆಳಂದ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ವೇಳೆ ನಡೆದಿದ್ದ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ತೀವ್ರಗೊಳಿಸಿದೆ. ಶನಿವಾರ (ಅ.18) ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಬಳಿ ಸುಟ್ಟ ಮತದಾರರ ದಾಖಲೆಗಳ ರಾಶಿ ಪತ್ತೆಯಾದ ಘಟನೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ದಾಖಲೆಗಳ ಮೂಲಕ ಸುಮಾರು 6,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲು ಸಂಚು ರೂಪಿಸಲಾಗಿತ್ತು ಎಂಬುದು ಬಹಿರಂಗವಾಗಿದೆ.

ಗುತ್ತೇದಾರ್ ಸ್ಪಷ್ಟನೆ….

ಈ ಕುರಿತು ಸ್ಪಷ್ಟನೆ ನೀಡಿದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, “ಸ್ವಚ್ಛತಾ ಅಭಿಯಾನದ ಪ್ರಯುಕ್ತ ಮನೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ಹಳೆಯ ದಾಖಲೆಗಳನ್ನು ಹೊರಗೆ ಹಾಕಿ ಸುಟ್ಟುಹಾಕಿದ್ದಾರೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ದುರುದ್ದೇಶ ಇದ್ದಿದ್ದರೆ ಮನೆಯ ಮುಂದೆ ಅಲ್ಲ, ಬೇರೆಡೆ ಸುಟ್ಟಿರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಎಸ್‌ಐಟಿ ದಾಳಿ ಮತ್ತು ತನಿಖೆ…

ಶುಕ್ರವಾರದಂದು ಎಸ್‌ಐಟಿ ಅಧಿಕಾರಿಗಳು ಗುತ್ತೇದಾರ್ ಅವರ ಪುತ್ರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಶೋಧ ನಡೆಸಿದ್ದರು.

ತನಿಖಾ ಮೂಲಗಳ ಪ್ರಕಾರ, 2023ರ ಚುನಾವಣೆ ಮುನ್ನ ಮತದಾರರ ಪಟ್ಟಿಯಿಂದ ನಿಜವಾದ ಮತದಾರರ ಹೆಸರನ್ನು ಅಳಿಸಲು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳವರೆಗೆ ನೀಡಲಾಗಿತ್ತು ಎಂಬ ಮಾಹಿತಿ ದೊರೆತಿದೆ.

ಕಾಂಗ್ರೆಸ್ ಆರೋಪ…

ಈ ವಿಷಯವನ್ನು ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ಅವರು ಆಳಂದ ಕ್ಷೇತ್ರದಲ್ಲಿ “ಮತ ಕಳ್ಳತನ ನಡೆದಿದೆ” ಎಂದು 2023ರ ಚುನಾವಣಾ ಪ್ರಚಾರದ ಸಮಯದಲ್ಲಿ ಆರೋಪಿಸಿದ್ದರು. ಕೈಪಕ್ಷದ ಪ್ರಕಾರ, ಕೆಲವು ನಕಲಿ ಕರೆಗಳ ಮೂಲಕ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲು ಪ್ರಯತ್ನ ನಡೆದಿತ್ತು. ಆದರೆ, ಅದನ್ನು ಸರಿಯಾದ ಸಮಯದಲ್ಲಿ ಪತ್ತೆಹಚ್ಚಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ಗೆದ್ದು, ಗುತ್ತೇದಾರ್ ಸೋತಿದ್ದರು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ತನಿಖೆಯಿಂದ ಬಹಿರಂಗವಾದ ಅಂಶಗಳು….

ತನಿಖೆಯಿಂದ ಪತ್ತೆಯಾದಂತೆ, 6,018 ಮತದಾರರ ಅಳಿಕೆ ಅರ್ಜಿಗಳಲ್ಲಿ ಕೇವಲ 24 ಮತದಾರರು ಮಾತ್ರ ಮೃತ ಅಥವಾ ಸ್ಥಳಾಂತರಗೊಂಡವರು. ಉಳಿದ ಹೆಸರುಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಅಳಿಸಲು ಯತ್ನಿಸಲಾಗಿತ್ತು ಎಂದು ಎಸ್‌ಐಟಿ ವರದಿ ಸೂಚಿಸಿದೆ.

ಮುಂದಿನ ಕ್ರಮ…

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಮುಂದುವರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಡೇಟಾ ಎಂಟ್ರಿ ಕಂಪನಿಗಳು ಮತ್ತು ಸ್ಥಳೀಯ ಚುನಾವಣಾ ಸಿಬ್ಬಂದಿಯ ಪಾತ್ರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

Related posts