ಸುರತ್ಕಲ್: ಚೂರಿಕೇಟಿನಿಂದ ಯುವಕರಿಗೆ ಹಲ್ಲೆ – ನಾಲ್ವರು ಆರೋಪಿಗಳ ಬಂಧನ
ಸುರತ್ಕಲ್: ಚೂರಿಕೇಟಿನಿಂದ ಯುವಕರಿಗೆ ಹಲ್ಲೆ – ನಾಲ್ವರು ಆರೋಪಿಗಳ ಬಂಧನ
ಸುರತ್ಕಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಕಟ್ಲ ಪ್ರದೇಶದ ಸುಶಾಂತ್ ಅಲಿಯಾಸ್ ಕಡವಿ (29), ಕೆ.ವಿ. ಅಲೆಕ್ಸ್ (27), ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆಯ ಅರುಣ್ ಶೆಟ್ಟಿ (56) ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಪ್ರಮುಖ ಆರೋಪಿ, ರೌಡಿ ಶೀಟರ್ ಹಾಗೂ ಸಂಘಪರಿವಾರದ ಕಾರ್ಯಕರ್ತನಾದ ಗುರುರಾಜ್ ಮತ್ತು ಆಶ್ರಯ ಒದಗಿಸಿದ್ದ ಅಶೋಕ್ ಪರಾರಿಯಾಗಿದ್ದು, ಇವರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ರಾತ್ರಿ ಸುರತ್ಕಲ್ ಸಮೀಪದ ದೀಪಕ್ ಬಾರ್ ಬಳಿ ನಡೆದ ಈ ಘಟನೆ ವೇಳೆ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಲ್ಲೆಗೆ ಮುನ್ನ, ಆರೋಪಿಗಳು ಹಿಂದೆಯೂ ಅನೇಕ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

