ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ
ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ
ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ರಂಜಿತಾ (27) ಎಂದು ಗುರುತಿಸಲಾಗಿದ್ದು, ಅವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ರಂಜಿತಾ ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಅಕ್ಟೋಬರ್ 25ರಂದು ನಡೆದ ಈ ಘಟನೆ ಕುರಿತಂತೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ರಂಜಿತಾ ತಮ್ಮ ಸ್ನೇಹಿತೆ ರೇಖಾ ಅವರೊಂದಿಗೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನಕ್ಕೆ ಹೋದ ರಂಜಿತಾ ಬಹಳ ಹೊತ್ತಾದರೂ ಹೊರಬರದೇ ಇದ್ದ ಕಾರಣ ಅನುಮಾನಗೊಂಡ ರೇಖಾ ಬಾಗಿಲು ತೆರೆದು ನೋಡಿದಾಗ, ರಂಜಿತಾ ಕುಸಿದು ಬಿದ್ದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಲಾಗಿದ್ದು, ವೈದ್ಯರು ಆಗಮಿಸಿ ರಂಜಿತಾ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಬಾತ್‌ರೂಮ್‌ನ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹಾಗೆಯೇ ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂಬ ಸಾಧ್ಯತೆಗೂ ಪೊಲೀಸರು ತೂಕ ನೀಡುತ್ತಿದ್ದಾರೆ.
ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೋಂಸ್ಟೇ ಮಾಲೀಕರನ್ನು ವಿಚಾರಣೆಗಾಗಿ ಕರೆಸಲಾಗಿದೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

