ಸುದ್ದಿ 

ಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು

Taluknewsmedia.com

ಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು

ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ಶೋಕ ತಂದಿದೆ. ದುರಂತದಲ್ಲಿ ಮೃತಪಟ್ಟವರು ಮಾಲಾ (58) ಎಂದು ಗುರುತಿಸಲಾಗಿದೆ.

ಮಾಲಾ ಇಂದು ತಮ್ಮ 58ನೇ ಜನ್ಮದಿನವನ್ನು ಆಚರಿಸಬೇಕಾಗಿತ್ತು. ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅವರು ನಿನ್ನೆ ಮಧ್ಯಾಹ್ನ ಬ್ಯೂಟಿ ಪಾರ್ಲರ್‌ಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಪೊಲೀಸ್ ಮೂಲಗಳ ಪ್ರಕಾರ, ವಿಜಯನಗರದ ಆರ್‌ಪಿಸಿ ಲೇಔಟ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಮಾಲಾ ಅವರನ್ನು ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದರು.

ಹಂಪಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸವಿದ್ದ ಮಾಲಾ ಸ್ಥಳೀಯರಲ್ಲಿ ಎಲ್ಲರಿಗೂ ಪರಿಚಿತರು. “ಮಕ್ಕಳು ಅಥವಾ ಹಿರಿಯರು ರಸ್ತೆ ದಾಟುತ್ತಿದ್ದರೆ ಸ್ವತಃ ಕೈಹಿಡಿದು ಸಹಾಯ ಮಾಡುವವರು. ಇಂಥವರು ಬಸ್‌ಗೆ ಅಡ್ಡ ಬಂದಿದ್ದಾರೆ ಅಂತ ನಂಬಲು ಆಗುವುದಿಲ್ಲ,” ಎಂದು ಕುಟುಂಬದವರು ಕಣ್ಣೀರಿನಲ್ಲಿ ಹೇಳಿದ್ದಾರೆ.

ಜನ್ಮದಿನದ ನಿಮಿತ್ತ ಊರಿನಿಂದ ಬೆಂಗಳೂರಿಗೆ ಬಂದಿದ್ದ ಕುಟುಂಬ ಸದಸ್ಯರು ದುರ್ಘಟನೆಯ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಸಂಭ್ರಮದ ಮನೆಯಲ್ಲಿ ಇದೀಗ ಕಣ್ಣೀರು, ನೋವಿನ ವಾತಾವರಣ ಆವರಿಸಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Related posts