PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ!
PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ!
ಬೆಂಗಳೂರು: ಅಧಿಕಾರಿಗಳ ಕಿರುಕುಳ ಮತ್ತೊಮ್ಮೆ ಜೀವ ಬಲಿತೆಗೆದುಕೊಂಡಿದೆ. ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ PDO ಗೀತಾಮಣಿ ನೀಡಿದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರಯ್ಯ, ಕಳೆದ ಮೂರು ತಿಂಗಳಿಂದ ಸಂಬಳ ಕೊಡದೇ, ಅನಗತ್ಯ ಒತ್ತಡ ಹೇರಿದ PDO ಗೀತಾಮಣಿಯ ಕಿರುಕುಳದಿಂದ ಕಂಗೆಟ್ಟು ಜೀವ ತ್ಯಜಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗ್ರಂಥಾಲಯದ ಬಯೋಮೆಟ್ರಿಕ್ ಹಾಜರಾತಿ ಹಾಕದೇ ಹೋದ ಆರೋಪದ ಹೆಸರಲ್ಲಿ ಸತತ ಕಿರುಕುಳ ನೀಡುತ್ತಿದ್ದ PDO ಯ ವರ್ತನೆ ಮಾನವೀಯ ಮಿತಿಗಳನ್ನು ದಾಟಿದ್ದಂತೆ ಆರೋಪಗಳು ವ್ಯಕ್ತವಾಗಿವೆ. ದಿನದಿನಕ್ಕೂ ಹೀನಾಯ ಕಿರುಕುಳವನ್ನು ಎದುರಿಸಲು ಸಾಧ್ಯವಾಗದೆ, ರಾಮಚಂದ್ರಯ್ಯ ವಿಷ ಸೇವಿಸಿ ಬದುಕು ಮುಗಿಸಿದ್ದಾರೆ.
ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಮೃತ ರಾಮಚಂದ್ರಯ್ಯನ ಅಣ್ಣನ ಮಗನ ದೂರು ಆಧರಿಸಿ ತ್ಯಾಮಗೊಂಡ್ಲು ಪೊಲೀಸ್ ಠಾಣೆ PDO ಗೀತಾಮಣಿ ವಿರುದ್ಧ FIR ದಾಖಲಿಸಿದ್ದು, ಈಗ ಅವಳ ಬಂಧನದ ಭೀತಿ ಪಡುತ್ತಿದ್ದಾಳೆ.
ಈ ಘಟನೆಯಿಂದ ಮತ್ತೆ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿರುವ ಅಧಿಕಾರಿಗಳ ಏಕಪಕ್ಷೀಯ ಧೋರಣೆ ಮತ್ತು ಮಾನವೀಯತೆರಹಿತ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನಸೇವೆಯ ಹೆಸರಿನಲ್ಲಿ ಅಧಿಕಾರ ಕುರ್ಚಿಯಲ್ಲಿ ಕೂತವರು ಮಾನವ ಜೀವನದ ಮೌಲ್ಯವನ್ನು ಮರೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಜನಾಭಿಪ್ರಾಯ ಕೇಳಿಬರುತ್ತಿದೆ.

