ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ
ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ.
ಭಜರಂಗ ಸಿನೆಮಾ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಅವರ ನಿರ್ಮಾಣದಲ್ಲಿ, ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿತು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, “ಇದು ಮಕ್ಕಳ ಚಿತ್ರವಾದರೂ ಎಲ್ಲ ವಯಸ್ಸಿನವರಿಗೂ ಹತ್ತಿರವಾಗುವಂತಹ ಸಾಮಾಜಿಕ ಸಂದೇಶ ಹೊಂದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಷ್ಟೇ ಅಲ್ಲ, ಆ ಶಾಲೆಗಳಲ್ಲಿ ಕಲಿತವರೂ ಮುಂದಾಗಿ ನೆರವಾಗಬೇಕು ಎಂಬ ಆಶಯವನ್ನು ಕಥೆಯಲ್ಲಿ ತೋರಿಸಿದ್ದೇವೆ” ಎಂದರು.
ಕಥೆಯ ಹಿನ್ನಲೆ ಕುರಿತು ವಿವರಿಸುತ್ತಾ, “ರೈಟ್ ಬ್ರದರ್ಸ್ ಫ್ಲೈಟ್ ಇಂಜಿನಿಯರಿಂಗ್ನಲ್ಲಿ ಸಾಧನೆ ಮಾಡಿದಂತೆ, ನಮ್ಮ ಕಥೆಯ ಇಬ್ಬರು ವಿದ್ಯಾರ್ಥಿಗಳು ಗಾಳಿಪಟ ಸ್ಪರ್ಧೆಯಲ್ಲಿ ತೋರಿದ ಸೃಜನಾತ್ಮಕ ಪ್ರತಿಭೆಯಿಂದ ‘ಕೈಟ್ ಬ್ರದರ್ಸ್’ ಎನ್ನಿಸಿಕೊಂಡು ತಮ್ಮ ಶಾಲೆಯ ಅಭಿವೃದ್ಧಿಗೆ ಹಣ ಗಳಿಸುವರು. ಅದೇ ಚಿತ್ರಕ್ಕೆ ಶೀರ್ಷಿಕೆ ಆಯ್ಕೆ ಮಾಡುವ ಪ್ರೇರಣೆ” ಎಂದು ಹೇಳಿದರು.
ಚಿತ್ರದಲ್ಲಿ ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಸೇರಿದಂತೆ ಧಾರವಾಡದ ಅನೇಕ ಹೊಸ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಮೂರು ಮನಮುಟ್ಟುವ ಹಾಡುಗಳನ್ನು ವಿಜಯ್ ಭರಮಸಾಗರ, ಸಿಂಪಲ್ ಸುನಿ ಹಾಗೂ ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಬರೆದಿದ್ದು, ಅನೀಶ್ ಚೆರಿಯನ್ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಚಿತ್ರಣ ಮಾಡಿದ್ದು, ಧಾರವಾಡದ ನೈಸರ್ಗಿಕ ಸೌಂದರ್ಯವನ್ನು ಆಕರ್ಷಕವಾಗಿ ಹಿಡಿದಿಟ್ಟಿದ್ದಾರೆ.
“ಈ ಚಿತ್ರದಲ್ಲಿ ಕೆಲಸ ಮಾಡಿದ್ದು ನನಗೆ ಹೊಸ ಅನುಭವ. ವಿರೇನ್ ಬಗಾಡೆ ಪ್ರತಿಭಾವಂತ ನಿರ್ದೇಶಕ. ಸಾರ್ಥಕ ಸಂದೇಶ ಇರುವ ಚಿತ್ರ ಇದು” ಎಂದು ಅಶೋಕ್ ಕಶ್ಯಪ್ ಪ್ರಶಂಸಿಸಿದರು.
ಕಾರ್ಯಕಾರಿ ನಿರ್ಮಾಪಕ ವಿನೋದ್ ಬಗಾಡೆ ಹಾಗೂ ನಿರ್ಮಾಪಕ ಮಂಜುನಾಥ್ ಬಿ.ಎಸ್ ಚಿತ್ರ ಕುರಿತು ಮಾತನಾಡಿ, ಪ್ರೇಕ್ಷಕರ ಬೆಂಬಲ ಕೋರಿದರು. ಸಂಗೀತ ನಿರ್ದೇಶಕ ಅನೀಶ್ ಚೆರಿಯನ್ ಹಾಡುಗಳ ಹಿನ್ನಲೆ ಕುರಿತು ವಿವರಿಸಿದರು. ನಿರ್ದೇಶಕ ಅರವಿಂದ್ ಕೌಶಿಕ್, ಸಂತೋಷ್ ರಾಧಾಕೃಷ್ಣನ್ ಹಾಗೂ ಗೀತರಚನೆಕಾರ ವಿಜಯ್ ಭರಮಸಾಗರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

