ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಅಗತ್ಯ : ಶಿವಶಂಕರ್ಮುಖ್ಯಮಂತ್ರಿ ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ
ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಅಗತ್ಯ : ಶಿವಶಂಕರ್
ಮುಖ್ಯಮಂತ್ರಿ ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಖಾಲಿಯಿರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರಗೊಳಿಸಬೇಕು ಎಂದು ಪ.ಜಾತಿ/ವರ್ಗದ ಸರಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಅವರು ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ — ಸರ್ಕಾರದ ವಿವಿಧ ಇಲಾಖೆಯಲ್ಲಿ 7.70 ಲಕ್ಷ ಹುದ್ದೆಗಳಿದ್ದರೂ, ಸುಮಾರು 2.80 ಲಕ್ಷ ಹುದ್ದೆಗಳು ಇನ್ನೂ ಖಾಲಿಯಾಗಿವೆ. ಯುವಕರಿಗೆ ಅವಕಾಶ ದೊರಕಬೇಕಾದ ಈ ಹುದ್ದೆಗಳನ್ನು ತುಂಬದೆ ಇರುವುದು ಬೇಸರ ತಂದಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ದಲಿತರ ಹಿತಕ್ಕಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಒಳಮೀಸಲಾತಿ ವಿಷಯದಲ್ಲಿ ಸರಿಯಾದ ನಿರ್ವಹಣೆ ಅಗತ್ಯವಾಗಿತ್ತು, ಆದರೆ ಅದರಿಂದ ದಲಿತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂದರು.
ದೇಶದಲ್ಲಿ ಸಂವಿಧಾನದ ವಿರುದ್ಧ ನಡೆಯುತ್ತಿರುವ ಅಸಹ್ಯಕರ ವರ್ತನೆ ಖಂಡನೀಯ. ಇಂತಹ ಪ್ರವೃತ್ತಿಗಳಿಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಅನಿವಾರ್ಯವಾದರೆ, ದಲಿತ ಮುಖಂಡರಿಗೆ ಆ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ದಲಿತ ನಾಯಕರಾದ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಡಾ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ ಮುಂತಾದವರು ಸಮರ್ಥ ನಾಯಕರು ಎಂದು ಪ್ರಶಂಸಿಸಿದರು.
ನೌಕರರ ಪೆನ್ಶನ್ ಸಂಬಂಧ ಎನ್ಪಿಎಸ್ ವ್ಯವಸ್ಥೆಯಲ್ಲಿ ಅನೇಕ ಅಸಮರ್ಪಕತೆಗಳಿವೆ. ಅದನ್ನು ಹಳೆಯ ಒಪಿಎಸ್ ಮಾದರಿಯಲ್ಲಿ ಮರುಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಬ್ಯಾಕ್ಲಾಗ್ ಹುದ್ದೆಗಳ ಭರ್ತಿಯನ್ನು ವಿಳಂಬಗೊಳಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿ ಆಗಬೇಕು ಎಂದು ಹೇಳಿದರು.

