ಪದವೀಧರರ ಧ್ವನಿಯಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ: ಬಿಜೆಪಿ ಮುಖಂಡ ವಸಂತಕುಮಾರ್..
ಪದವೀಧರರ ಧ್ವನಿಯಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ: ಬಿಜೆಪಿ ಮುಖಂಡ ವಸಂತಕುಮಾರ್
“ನಾನು ಪದವೀಧರರು ಹಾಗೂ ಶಿಕ್ಷಕರ ನಿಜವಾದ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇದು ಕೇವಲ ರಾಜಕೀಯ ಆಸೆಗಾಗಿ ಅಲ್ಲ, ಬದಲಾಗಿ ಜನರ ಹಿತಕ್ಕಾಗಿ,” ಎಂದು ಹಿರಿಯ ವಕೀಲ ಹಾಗೂ ಬಿಜೆಪಿ ನಾಯಕ ವಸಂತಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಳೆದ ಎರಡು ದಶಕಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬೆಳವಣಿಗೆಯ ಹಾದಿಯಲ್ಲಿ ನನ್ನ ಶ್ರಮ ಮತ್ತು ಬದ್ಧತೆಯನ್ನು ಪರಿಗಣಿಸಿ, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಮಾರ್ಗದರ್ಶನ ಸಿಕ್ಕಿದೆ,” ಎಂದು ವಿವರಿಸಿದರು.
ಅವರು ಮುಂದುವರೆದು, “ಪಕ್ಷದ ಹಿರಿಯರಿಂದ ನನಗೆ ಅಭ್ಯರ್ಥಿತ್ವದ ಬಗ್ಗೆ ಪ್ರೋತ್ಸಾಹ ಹಾಗೂ ಭರವಸೆ ದೊರೆತಿದೆ. ಜನರ ಹಿತಾಸಕ್ತಿ ಕಾಪಾಡುವುದು ನನ್ನ ಮೊದಲ ಗುರಿ,” ಎಂದು ಹೇಳಿದರು.
ನಿರುದ್ಯೋಗ ಭತ್ಯೆ ಯೋಜನೆ ಕೇವಲ ರಾಜಕೀಯ ನಾಟಕ… ವಸಂತಕುಮಾರ್ ಕಾಂಗ್ರೆಸ್ ಸರ್ಕಾರದ ನಿರುದ್ಯೋಗ ಭತ್ಯೆ ಯೋಜನೆಯನ್ನು ಟೀಕಿಸಿ, “ಈ ಯೋಜನೆ ಯುವಕರಿಗೆ ತಾತ್ಕಾಲಿಕ ನೆರವಾಗಬಹುದು, ಆದರೆ ಇದು ಚುನಾವಣಾ ಪ್ರಯೋಜನಕ್ಕಾಗಿ ರೂಪಿಸಲಾದ ರಾಜಕೀಯ ಉಪಾಯ. ಬಿಜೆಪಿ ಪಕ್ಷದ ಮೇಲೆ ಇದರ ಯಾವುದೇ ಹಿನ್ನಡೆ ಉಂಟಾಗುವುದಿಲ್ಲ,” ಎಂದರು.
“ಯುವಕರು ಸ್ವಾವಲಂಬಿಗಳಾಗಬೇಕಾದರೆ ಕೌಶಲ್ಯಾಭಿವೃದ್ಧಿ ಮತ್ತು ಮಾರ್ಗದರ್ಶನ ಅಗತ್ಯ. ಅದಕ್ಕಾಗಿ ನಮ್ಮ ಪಕ್ಷವು ಪರಿಣಾಮಕಾರಿಯಾದ ಯೋಜನೆಗಳನ್ನು ಕೈಗೊಂಡಿದೆ,” ಎಂದು ಅವರು ಹೇಳಿದರು.
ಮುದ್ರಾ ಯೋಜನೆಗೆ ಬ್ಯಾಂಕ್ ಸಿಬ್ಬಂದಿಯ ಪಾತ್ರ ಮಹತ್ವದದು… ಮುದ್ರಾ ಯೋಜನೆ ಕುರಿತು ಮಾತನಾಡಿದ ಅವರು, “ಈ ಯೋಜನೆಯ ಯಶಸ್ಸು ಸಾಲ ನೀಡುವ ಬ್ಯಾಂಕ್‌ಗಳ ಪ್ರಬಂಧಕರ ಹಾಗೂ ಸಿಬ್ಬಂದಿಗಳ ನಿಷ್ಠೆಯ ಮೇಲೆ ಅವಲಂಬಿತವಾಗಿದೆ. 10 ಲಕ್ಷ ರೂಪಾಯಿವರೆಗೆ ಜಾಮೀನುರಹಿತ ಸಾಲ ನೀಡುವುದು ಯೋಜನೆಯ ಮುಖ್ಯ ಉದ್ದೇಶ. ಯಾವುದೇ ರೀತಿಯ ಭದ್ರತೆ ಕೇಳುವುದು ಆರ್‌ಬಿಐ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ,” ಎಂದು ಹೇಳಿದರು.
ವಸಂತಕುಮಾರ್ ಅವರಿಗೆ ಬೆಂಬಲ…
ಬಿಜೆಪಿ ಮುಖಂಡ ಅಣೇಕಟ್ಟೆ ರಾಕೇಶ್ ಮಾತನಾಡಿ, “ವಸಂತಕುಮಾರ್ ಸಂಘ ಪರಿವಾರದ ಮೂಲದವರು, ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರು. ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಅವರಿಗೆ ಸ್ಪಷ್ಟ ಅರಿವು ಇದೆ. ಇಂತಹ ಯುವ, ಚಿಂತನೆ ಹೊಂದಿದ ನಾಯಕರು ವಿಧಾನಪರಿಷತ್ತಿಗೆ ಬರಬೇಕು,” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಿಪಟೂರು ಸದಾಶಿವಯ್ಯ, ವಕೀಲ ಮೋಹನ್, ಹೊನ್ನಬಾಗಿ ಬಸವರಾಜ್, ಮಿಲಿಟರಿ ಶಿವಣ್ಣ, ಹಾಗೂ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

