ಸುದ್ದಿ 

ಹೊಟ್ಟೆ ಹಸಿವಿನ ಹೆಸರಲ್ಲಿ ಬೇಕರಿ ಬೀಗ ಒಡೆಯಲು ಯತ್ನಿಸಿದ ಯುವಕ ಬಂಧನ

Taluknewsmedia.com

ಹೊಟ್ಟೆ ಹಸಿವಿನ ಹೆಸರಲ್ಲಿ ಬೇಕರಿ ಬೀಗ ಒಡೆಯಲು ಯತ್ನಿಸಿದ ಯುವಕ ಬಂಧನ

ಬೆಂಗಳೂರು ನಗರದ ತ್ಯಾಗರಾಜ ನಗರ 2ನೇ ಬ್ಲಾಕ್‌ನಲ್ಲಿ ಬೆಳ್ಳಂಬೆಳಿಗ್ಗೆ ಕಳ್ಳತನ ಯತ್ನ ನಡೆದಿದ್ದು, ಹೊಟ್ಟೆ ತುಂಬಿಸಲು ಆಹಾರಕ್ಕಾಗಿ ಈ ಕೃತ್ಯಕ್ಕೆ ಮುಂದಾಗಿದ್ದೇನೆಂದು ಆರೋಪಿ ಹೇಳಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನಂದೀಶ್ವರ ಬೇಕರಿಯಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆ ಮದನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಿಮೆಂಟ್ ಬ್ಲಾಕ್ ಬಳಸಿ ಅಂಗಡಿಯ ಬೀಗ ಒಡೆದು ಒಳನುಗ್ಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಶಂಕಾಸ್ಪದ ಚಟುವಟಿಕೆ ಗಮನಿಸಿ, ತಕ್ಷಣವೇ ಮಧ್ಯಪ್ರವೇಶ ಮಾಡಿ ಆರೋಪಿ ಮದನ್ ಅನ್ನು ಹಿಡಿದು ಬಿಟ್ಟರು.

ಸಮಯ ವ್ಯರ್ಥ ಮಾಡದೇ ಸಾರ್ವಜನಿಕರು 112 ಅಪಘಾತ ನಿಯಂತ್ರಣ ಕೇಂದ್ರಕ್ಕೆ ದೂರು ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ತಂಡ ಮದನ್ ಅವರನ್ನು ವಶಕ್ಕೆ ಪಡೆಯಿತು.

ಪ್ರಾಥಮಿಕ ವಿಚಾರಣೆ ವೇಳೆ ತನ್ನ ಹೆಸರು ಮದನ್ ಕುಮಾರ್ ಎಂದು ಹೇಳಿಕೊಂಡ ಆರೋಪಿ, ಬಳೆಗೆರೆ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ. ಹೊಟ್ಟೆ ಹಸಿವು ತಾಳಲಾಗದೆ ಬೇಕರಿಗೆ ನುಗ್ಗಲು ಪ್ರಯತ್ನಿಸಿದ್ದೇನೆಂದು ಆತ ಪೊಲೀಸರಿಗೆ ಹೇಳಿದ್ದಾನೆ.

ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Related posts