ಶಿವಮೊಗ್ಗ – ಎಫ್.ಡಿ.ಎ ಲಕ್ಷ್ಮೀಪತಿ ಮನೆ ಮೇಲೆ ಲೋಕಾಯುಕ್ತ ದಾಳಿ: 2.49 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ
ಶಿವಮೊಗ್ಗ – ಎಫ್.ಡಿ.ಎ ಲಕ್ಷ್ಮೀಪತಿ ಮನೆ ಮೇಲೆ ಲೋಕಾಯುಕ್ತ ದಾಳಿ: 2.49 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ
ಶಿವಮೊಗ್ಗದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಎಫ್.ಡಿ.ಎ ಲಕ್ಷ್ಮೀಪತಿ ಸಿ.ಎನ್ ಅವರ ಮನೆ ಹಾಗೂ ಕಚೇರಿಗಳಿಂದ ಒಟ್ಟು 2.49 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಗುರುವಾರ ಬೆಳಗ್ಗಿನ ಜಾವದಿಂದಲೇ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಮತ್ತು ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಅವರ ನೇತೃತ್ವದಲ್ಲಿ ಶಿವಮೊಗ್ಗ ಸೇರಿದಂತೆ ಐದು ಕಡೆ ಏಕಕಾಲದಲ್ಲಿ ದಾಳಿ ನಡೆಯಿತು. ದಾಳಿಯ ಸಂದರ್ಭದಲ್ಲಿ ಅನೇಕ ದಾಖಲೆಗಳು ಹಾಗೂ ಬೆಲೆಬಾಳುವ ವಸ್ತುಗಳು ಸಿಕ್ಕಿವೆ.
ಪತ್ತೆಯಾದ ಪ್ರಮುಖ ಆಸ್ತಿ ವಿವರಗಳು:
3 ಮನೆಗಳು ಮತ್ತು 3 ಎಕರೆ 20 ಗುಂಟೆ ಕೃಷಿ ಜಮೀನು – ಮೌಲ್ಯ: ₹1,63,80,000
ನಗದು ₹12,01,720
ಆಭರಣಗಳು – ₹23,29,880
ವಾಹನಗಳು – ₹23.04 ಲಕ್ಷ
ಗೃಹೋಪಯೋಗಿ ವಸ್ತುಗಳು – ₹27,47,881
ಒಟ್ಟು ಸೇರಿ ₹2,49,63,481 ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಲೋಕಾಯುಕ್ತ ಪ್ರಕಟಣೆ ಸ್ಪಷ್ಟಪಡಿಸಿದೆ.
ಲಕ್ಷ್ಮೀಪತಿ ಸಿ.ಎನ್ ಅವರು ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಎಫ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರೆದಿದೆ.

