ಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು,
ಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು, ಗ್ರಾಮೀಣ ಜನರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಸುಲಭವಾಗಿ ಹಾಗೂ ಡಿಜಿಟಲ್ ರೂಪದಲ್ಲಿ ಪಡೆಯುವ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಕಲ್ಪಿಸಿದೆ.
ಈ ಈ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ನಮೂನೆ 11A ಹಾಗೂ 11B ಡಿಜಿಟಲ್ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ನಿಯಮಗಳು 2025 ಆಧಾರದ ಮೇಲೆ ಈ ಪ್ರಕ್ರಿಯೆ ಇನ್ನಷ್ಟು ಸುಗಮಗೊಂಡಿದೆ.
ಈ ಹೊಸ ವ್ಯವಸ್ಥೆಯ ಪ್ರಮುಖ ಬದಲಾವಣೆಗಳಲ್ಲಿ, ಸಾರ್ವಜನಿಕರು ತಮ್ಮ ಮನೆಯಿಂದಲೇ ಈ-ಸ್ವತ್ತು ಪೋರ್ಟಲ್ ಮೂಲಕ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ನಿಗದಿತ ಅವಧಿಯೊಳಗೆ ದಾಖಲೆ ನೀಡದಿದ್ದರೆ ಸ್ವಯಂ ಚಾಲಿತ ಅನುಮೋದನೆ ಸಿಗುವ ವ್ಯವಸ್ಥೆಯೂ ಇದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ತೆರಿಗೆಗೆ ಒಳಪಡುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ನೀಡಲಾಗಿದೆ. ಜೊತೆಗೆ, ಖಾತಾ ವಿತರಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅನುಮೋದನೆ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಹಾಗೂ ಶುಲ್ಕಗಳನ್ನು ಏಕರೂಪವಾಗಿ ನಿಗದಿಪಡಿಸಲಾಗಿದ್ದು, ಪಂಚಾಯಿತಿ ಸೇವೆಗಳ ಶುಲ್ಕ ಹಾಗೂ ಮ್ಯುಟೇಶನ್ ಶುಲ್ಕಗಳನ್ನು ತಂತ್ರಾಂಶದ ಮೂಲಕವೇ ನಿಗದಿ ಮಾಡಲಾಗುತ್ತದೆ.
ಈ ಈ-ಸ್ವತ್ತು ವ್ಯವಸ್ಥೆ ಗ್ರಾಮೀಣ ಜನರ ಸಮಯ ಮತ್ತು ಹಣ ಉಳಿತಾಯ ಮಾಡುವುದರ ಜೊತೆಗೆ, ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕ ಮತ್ತು ತ್ವರಿತವಾಗಿ ಒದಗಿಸುವ ಗುರಿ ಹೊಂದಿದೆ. ಈ ಅಭಿಯಾನದಿಂದ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಗ್ರಾಮೀಣ ಆರ್ಥಿಕತೆಯ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆಯಿಟ್ಟಿದೆ.

