ರಾಜಕೀಯ ಸುದ್ದಿ 

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ.

Taluknewsmedia.com

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ.

ಯತ್ನಾಳ್ ಅವರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ದೃಢಪಡಿಸಿದರು. ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಅದು ಬಾಕಿ ಉಳಿದಿದೆ. ಆ ಪ್ರಕ್ರಿಯೆ ನಡೆಯುವವರೆಗೂ ನಮಗೊಂದು ಅವಕಾಶವಿದೆ ಎಂದು ಭಾವಿಸಿ ತಮ್ಮ ಅಭಿಪ್ರಾಯವನ್ನ ಹೇಳಿದ್ದೇವೆ ಎಂದು ಅವರು ವಿವರಿಸಿದರು.

ತಾವು ಹೈಕಮಾಂಡ್ ನೀಡಿದ ನಿರ್ಧಾರವನ್ನು ಪಾಲನೆ ಮಾಡುವ ಕಾರ್ಯಕರ್ತರು ಮತ್ತು ಅದರಲ್ಲಿ ನಿರಂತರವಾಗಿ ಇರುತ್ತೇವೆ. ತಮ್ಮ ಅಭಿಪ್ರಾಯವನ್ನು ಒಬ್ಬರಾಗಿ ಹೇಳುವುದಕ್ಕಿಂತ ಗುಂಪಾಗಿ ಹೇಳಲಾಗಿದೆ. ಯಾರನ್ನೋ ವೈಯಕ್ತಿಕವಾಗಿ ಗುರಿ ಮಾಡಿ ಹೇಳಿಲ್ಲ, ಅಥವಾ ಯಾರು ದೊಡ್ಡವರು, ಯಾರು ಸಣ್ಣವರು ಎಂದು ಹೇಳಿಲ್ಲ. ಈಗಿರುವವರು ಕೆಟ್ಟವರು ಅಥವಾ ಒಳ್ಳೆಯವರು ಎಂಬ ವಾದವೂ ಇದಲ್ಲ, ಬದಲಾಗಿ ಭವಿಷ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಅಭಿಪ್ರಾಯ ಹೇಳಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಹೈಕಮಾಂಡ್ ನಮ್ಮ ಅಭಿಪ್ರಾಯವನ್ನು ನಿಲ್ಲಿಸುವವರೆಗೂ ನಾವು ಅದನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರವೂ ತಮ್ಮ ಧ್ವನಿ ಕಡಿಮೆಯಾಗಿಲ್ಲ, ಮತ್ತು ತಾವು ಹೋರಾಟಗಳನ್ನು ಮುಂದುವರಿಸುತ್ತಿರುವುದಾಗಿ ಕುಮಾರ್ ಬಂಗಾರಪ್ಪ ಹೇಳಿದರು. ‘ನುಸುಳುಕೋರರ’ ಬಗ್ಗೆ ಎರಡು ಸರ್ಕಾರಗಳ ಗಮನಕ್ಕೆ ತಂದರೂ, ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಈ ಬಗ್ಗೆ ಸಭೆ ಕೂಡ ಮಾಡಿಲ್ಲ. ಯತ್ನಾಳ್ ಅವರು ಬಿಜೆಪಿಯಿಂದ ಹೊರಗೆ ಹೋದ ಮೇಲೆ ಹೆಚ್ಚು ಜನಪ್ರಿಯರಾಗಿದ್ದಾರೆ ಮತ್ತು ಅವರು ಬಿಜೆಪಿ ತತ್ವ-ಸಿದ್ದಾಂತಗಳೊಂದಿಗೆ ಪಕ್ವವಾಗಿದ್ದಾರೆ. ಇವತ್ತಲ್ಲ ನಾಳೆ ಪಕ್ಷ ಅವರನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗಲಾಟೆ ಅವರ ಆಂತರಿಕ ವಿಷಯವಾದರೂ, ಅವರ ಕಿತ್ತಾಟದಲ್ಲಿ ರಾಜ್ಯವು ಅಧೋಗತಿಗೆ ಹೋಗುತ್ತಿದೆ ಎಂದು ಕುಮಾರ್ ಬಂಗಾರಪ್ಪ ಆರೋಪಿಸಿದರು. ರಾಜ್ಯದ ಜನರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಶುರುವಾಗಿದೆ, ಏಕೆಂದರೆ ಜನ ಬಹಳ ಅಪೇಕ್ಷೆ ಪಟ್ಟು ಬದಲಾವಣೆಗೆ ಸರ್ಕಾರ ತಂದಿದ್ದರೂ ಅವರ ನಿರೀಕ್ಷೆಗಳು ಹುಸಿಯಾಗಿವೆ. ರಾಜ್ಯವು ಆರ್ಥಿಕ ಸ್ಥಿತಿ ಕುಸಿತ ಮತ್ತು ಹಣಕಾಸಿನ ದುರ್ಬಳಕೆ ಹೆಚ್ಚಳವನ್ನು ಎದುರಿಸುತ್ತಿದೆ ಎಂದು ಅವರು ದೂರಿದರು.

ರಾಜ್ಯದ ಹಿತಕ್ಕೆ ರಾಜಕೀಯ ಇರಬೇಕು, ಆದರೆ ಇಲ್ಲಿ ಸ್ವಾರ್ಥಕ್ಕಾಗಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಬಂಡವಾಳ ಹೂಡಲು ಯಾರೂ ಸಹ ರಾಜ್ಯಕ್ಕೆ ಮುಂದೆ ಬರುತ್ತಿಲ್ಲ. ಕುರ್ಚಿ ಕಿತ್ತಾಟವು ಸಾಮಾನ್ಯವಾಗಿ ಎಲ್ಲಾ ಪಕ್ಷಗಳಲ್ಲಿ ಇರುತ್ತದೆ, ಆದರೆ ರಾಜ್ಯ ಹಾಗೂ ಜನರಿಗೆ ಸಂಕಷ್ಟ ತರುವುದು ಸೂಕ್ತವಲ್ಲ ಎಂದು ಅವರು ಹೇಳಿದರು.

ಲಕ್ಷಣ್ ಸವದಿ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯೋದು ಸುಳ್ಳು ಮತ್ತು ಸಾಧ್ಯವೇ ಇಲ್ಲ. ಈಗ ಚುನಾವಣೆ ತುಂಬಾ ದುಬಾರಿಯಾಗಿದ್ದು, 224 ಜನ ಶಾಸಕರು ಕೂಡ ಸುಭದ್ರ ಸರ್ಕಾರ ಇರಲಿ ಎಂದು ಬಯಸುತ್ತಾರೆ, ಮತ್ತು ಮಧ್ಯಂತರ ಚುನಾವಣೆಯನ್ನು ಯಾರೂ ಬಯಸುವುದಿಲ್ಲ ಎಂದರು. ಮಧ್ಯಂತರ ಚುನಾವಣೆ ಬರಬಾರದು, ಏಕೆಂದರೆ ಅದು ಜನರನ್ನ ಕೆರಳಿಸುತ್ತದೆ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಜನರು ಸಂಕಷ್ಟಕ್ಕೆ ಹೋಗುತ್ತಾರೆ.

ಅಧಿವೇಶನದ ನಂತರ ಕಾಂಗ್ರೆಸ್ ಸರ್ಕಾರದಲ್ಲಿ ‘ಮೇಜರ್ ಸರ್ಜರಿ’ ಆಗಲಿದೆ ಎಂಬ ಸದಾನಂದ ಗೌಡ ಹೇಳಿಕೆ ಕುರಿತು ಮಾತನಾಡಿದ ಅವರು, ಅದು ಸಿಎಂ ಹಾಗೂ ಅವರ ಹೈಕಮಾಂಡ್ಗೆ ಬಿಟ್ಟ ಒಂದು ಪ್ರಕ್ರಿಯೆ. ರಾಜ್ಯದ ಹಿತದೃಷ್ಟಿಯಿಂದ ಮಾತನಾಡುವುದಾದರೆ, ಸಚಿವರ ಕಾರ್ಯವೈಖರಿ ನೋಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು, ಏಕೆಂದರೆ ಜನ ಕೂಡ ಉತ್ತಮ ಕೆಲಸ ಮಾಡುವವರು ಬರಲಿ ಎಂದು ಅಪೇಕ್ಷಿಸುತ್ತಾರೆ ಎಂದು ಸಲಹೆ ನೀಡಿದರು.

Related posts