ರಾಜಕೀಯ ಸುದ್ದಿ 

ಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು?

Taluknewsmedia.com

ಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು?

“ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಮಹಿಳಾ IAS ಅಧಿಕಾರಿ–ಎಸ್ಪಿ, ಡಿಸಿ ಮತ್ತು ಮತ್ತೊಬ್ಬರು–ಅದ್ಭುತ ಸಾಮರ್ಥ್ಯ ಹೊಂದಿರುವವರು. ಅವರಿಗೆ ನಾನು ಕೆಲವು ಸೂಚನೆಗಳನ್ನು ನೀಡಿದಾಗ, ಕೇವಲ ಒಂದೇ ತಿಂಗಳಲ್ಲಿ ಅವರು ಎತ್ತಿನಹೊಳೆ ನೀರಿನ ಸಮಸ್ಯೆಯನ್ನು ಬಗೆಹರಿಸಿ, ನೀರು ಮರುಪೂರೈಕೆ ಆಗುವಂತೆ ಮಾಡಿದ್ದಾರೆ. ಮೂರು ವರ್ಷಗಳಿಂದ ತೆರೆಯಲಾಗದೇ ಬಿಟ್ಟಿದ್ದ ಕೇವಲ 10 ಸಾವಿರ ಅಡಿ ಪೈಪ್‌ಲೈನ್ ಸಮಸ್ಯೆಯನ್ನು ಕೂಡ ಅವರು ಪರಿಹರಿಸಿದರು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

“ಮಹಿಳೆಯರು ಪುರುಷರಿಗಿಂತ ಹೆಚ್ಚು ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂಬುದು ನನ್ನ ನಂಬಿಕೆ. ಅವರಿಗೆ ಸರಿಯಾದ ದಿಕ್ಕುನಿರ್ಧೇಶ ಮತ್ತು ರಕ್ಷಣೆಯನ್ನು ನೀಡಿದರೆ, ಅವರು ಇನ್ನೂ ದೊಡ್ಡ ಸಾಧನೆಗಳನ್ನು ಮಾಡಬಹುದು. ಯಾರೂ ಮಹಿಳೆಯರನ್ನು ಶೋಷಿಸಬಾರದು, ಅಧಿಕಾರಿಗಳೇ ಆದರೂ ಕೂಡ ಅದಕ್ಕೆ ಅವಕಾಶ ಕೊಡಬಾರದು. ನಮ್ಮ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ತೀರ್ಮಾನಿಸಿದೆ,” ಎಂದು ಹೇಳಿದರು.

“ಹೆಣ್ಣುಮಕ್ಕಳಿಗೆ ಶಕ್ತಿ ಇದೆ, ಸಾಮರ್ಥ್ಯ ಇದೆ. ಹಾಸನಕ್ಕೆ ಹೋಗಿದ್ದಾಗ ಎತ್ತಿನಹೊಳೆ ನೀರಿನ ವಿಷಯದಲ್ಲಿ ಒಬ್ಬ ವ್ಯಕ್ತಿ ಸರ್ಕಾರದ ಜಾಗವನ್ನು ಕಬಳಿಸಿಕೊಂಡು ಪೈಪು ಹಾಕಲು, ಪವರ್ ಲೈನ್ ಹಾಕಲು ತಡೆ ಮಾಡುತ್ತಿದ್ದ. ಅದರ ಬಗ್ಗೆ ನಾನು ವಿಚಾರಿಸಿದಾಗ, ಆ ಮಹಿಳಾ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಂಡರು. ಅವರು ಕಾರ್ಯಕ್ಷಮರು, ಧೈರ್ಯಶಾಲಿಗಳು. ಇಂತಹ ಅಧಿಕಾರಿಗಳನ್ನು ಸರ್ಕಾರ ಸದಾ ಬೆಂಬಲಿಸಬೇಕು.”

ಶಿಕ್ಷಣ ಇಲಾಖೆಯಲ್ಲಿ ಇಂದು ಹೆಚ್ಚು ಶಿಕ್ಷಕಿಯರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನೂ ಡಿಕೆಶಿ ಪ್ರಸ್ತಾಪಿಸಿದರು:
“ಇಂದು ನಮ್ಮ ನೌಕರರ ಸಂಘದಲ್ಲೂ, ಶಿಕ್ಷಣ ಕ್ಷೇತ್ರದಲ್ಲೂ ಹೆಣ್ಣುಮಕ್ಕಳೇ ಹೆಚ್ಚು. ಅವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಮಾಜದ ಒಂದು ಭಾಗವಾದ ಅವರು ಬಲಿಷ್ಠರಾಗಲು ಸರ್ಕಾರದಿಂದ ಬೇಕಾಗಿರುವ ಸಹಕಾರವನ್ನು ನಾವು ಮುಂದುವರಿಸುತ್ತೇವೆ,” ಎಂದು ಹೇಳಿದರು.

Related posts