ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಉದ್ಯಮಿ ಲೋಕೇಶ್ ಅವರನ್ನು ಹಣಕ್ಕಾಗಿ ಅಪಹರಿಸಿದ ಘಟನೆ ತಡರಾತ್ರಿ ದೊಡ್ಡ ಸಂಚಲನ ಮೂಡಿಸಿತು. ಆದರೆ ಕೇವಲ ನಾಲ್ಕು ಗಂಟೆಗಳೊಳಗೇ ಪ್ರಕರಣವನ್ನು ಭೇದಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಚಾಕಚಕ್ಯತೆ ಮೆರೆದಿದ್ದಾರೆ.
ವಿಜಯನಗರ ಮೂರನೇ ಹಂತದಲ್ಲಿ ವಾಸಿಸುವ ಲೋಕೇಶ್, ಶುಕ್ರವಾರ ರಾತ್ರಿ ಹೆರಿಟೇಜ್ ಕ್ಲಬ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಟಾಟಾ ಸುಮೋ ಕಾರಿನಲ್ಲಿ ಬಂದ ಐವರು ಯುವಕರು ಅವರನ್ನು ಬಲವಂತವಾಗಿ ಕರೆದುಕೊಂಡು ಹೋದರು. ಅಪಹರಣದ ಬಳಿಕ ಲೋಕೇಶ್ ಅವರ ಮೊಬೈಲ್ ಫೋನ್ ಬಳಸಿ ಅವರ ಪತ್ನಿಗೆ ಕರೆ ಮಾಡಿದ ಆರೋಪಿಗಳು, ₹30 ಲಕ್ಷ ಹಣ ಬೇಡಿಕೆ ಇಟ್ಟಿದ್ದರು.
ಗಾಬರಿಗೊಂಡ ಲೋಕೇಶ್ ಅವರ ಪತ್ನಿ ತಕ್ಷಣವೇ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಮಾಹಿತಿ ಲಭ್ಯವಾದ ಕೂಡಲೇ ಪೊಲೀಸ್ ಇಲಾಖೆ ಪೂರ್ಣ ಶಕ್ತಿಯಲ್ಲಿ ಕಾರ್ಯಾಚರಣೆ ಆರಂಭಿಸಿತು. ಎಸಿಪಿ ರವಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಆನಂದ್, ಜಯಕೀರ್ತಿ ಹಾಗೂ ಮೇಟಗಳ್ಳಿ ಠಾಣೆಯ ಎಸ್‌ಐ ಗೌತಮ್ ಸೇರಿದಂತೆ ಸಿಬ್ಬಂದಿ ತಂಡ ಪ್ರಕರಣದ ತನಿಖೆಯಲ್ಲಿ ಜುಟುಗೊಂಡರು.
ಕಳೆದ 15 ದಿನಗಳಿಂದ ಲೋಕೇಶ್ ಅವರ ದಿನಚರಿಯನ್ನು ಗಮನಿಸುತ್ತಿದ್ದ ಆರೋಪಿಗಳು, ಕ್ಲಬ್‌ನಿಂದ ಮನೆಗೆ ಮರಳುವ ಸಮಯವನ್ನು ಗುರಿಯನ್ನಾಗಿಸಿಕೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ವಿವಿಧ ತಾಂತ್ರಿಕ ಮಾಹಿತಿ ಮತ್ತು ಮೊಬೈಲ್ ಟವರ್‌ಗಳ ಆಧಾರದ ಮೇಲೆ ಪೊಲೀಸರು ಅಪಹರಣಕಾರರ ಚಲನವಲನ ಪತ್ತೆ ಮಾಡಿ, ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಆರೋಪಿಗಳ ವಾಹನವನ್ನು ಅಟ್ಟಿಕೊಂಡರು. ಸಿನಿಮೀಯ ಶೈಲಿಯ ಚೇಸ್ ನಂತರ, ಎಲ್ಲ ಐದು ಮಂದಿಯನ್ನೂ ವಶಕ್ಕೆ ಪಡೆದು ಸುರಕ್ಷಿತವಾಗಿದ್ದ ಲೋಕೇಶ್ ಅವರನ್ನು ರಕ್ಷಿಸಲಾಯಿತು.
ತ್ವರಿತ ನಿರ್ದೇಶನ ಮತ್ತು ತಂತ್ರಜ್ಞಾನದ ಉಪಯೋಗದಿಂದ ಕೇವಲ ಕೆಲವು ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಮೈಸೂರು ಪೊಲೀಸರ ಕಾರ್ಯಾಚರಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

