ಸುದ್ದಿ 

80 ಲಕ್ಷ ಚಿನ್ನ–ಬೆಳ್ಳಿ ಕಳವು ಪ್ರಕರಣಕ್ಕೆ 6 ಗಂಟೆಯಲ್ಲಿ ತೆರೆ; ಮಹಾರಾಷ್ಟ್ರ ಗಡಿಯಲ್ಲೇ ಕಳ್ಳನಿಗೆ ಬಲೆ

Taluknewsmedia.com

80 ಲಕ್ಷ ಚಿನ್ನ–ಬೆಳ್ಳಿ ಕಳವು ಪ್ರಕರಣಕ್ಕೆ 6 ಗಂಟೆಯಲ್ಲಿ ತೆರೆ; ಮಹಾರಾಷ್ಟ್ರ ಗಡಿಯಲ್ಲೇ ಕಳ್ಳನಿಗೆ ಬಲೆ

ಗದಗದ ತೋಂಟದಾರ್ಯ ಮಠದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಶಾಂತಾದುರ್ಗಾ ಜ್ಯುವೆಲರ್ಸ್ ಅಂಗಡಿಯಲ್ಲಿ ನಡೆದ ಭಾರಿ ಕಳ್ಳತನ ಪ್ರಕರಣಕ್ಕೆ ಕೇವಲ ಆರು ಗಂಟೆಯಲ್ಲೇ ಪೊಲೀಸರು ತೆರೆ ಎಳೆದಿದ್ದಾರೆ. ಅಹ್ಮದಾಬಾದ್ ಮೂಲದ ದರೋಡೆಕೋರನನ್ನು ಮಹಾರಾಷ್ಟ್ರ ಗಡಿಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಒಟ್ಟಾರೆ 80.47 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಜ್ರ ಮತ್ತು ನಗದು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಅಂಶಗಳು..

ಕೇವಲ 6 ಗಂಟೆಗಳಲ್ಲಿ ಪ್ರಕರಣ ಭೇದನೆ ಮಹಾರಾಷ್ಟ್ರ ಪೊಲೀಸರು–ಗದಗ ಪೊಲೀಸರು ಜಂಟಿ ಕಾರ್ಯಾಚರಣೆ

ಲಾಡ್ಜ್‌ನಲ್ಲಿ ಒಂದು ವಾರ ವಾಸ್ತವ್ಯದಿಂದ ಅಂಗಡಿಯ ಮೇಲೆ ಕಣ್ಣಿಟ್ಟಿದ್ದ ಖದೀಮರು ಗ್ಯಾಸ್ ಕಟರ್ ಬಳಸಿ ಮೂರನೇ ಮಹಡಿಯ ಕಿಟಕಿಯಿಂದ ಪ್ರವೇಶ

ಕೃತ್ಯ ಹೇಗೆ ನಡೆದಿದೆ?

ಬಂಧಿತ ಮಹಮ್ಮದ ಹುಸೇನ ಸಿದ್ಧಕಿ (ಗುಜರಾತ್ ಮೂಲ) ಜ್ಯುವೆಲರ್ಸ್ ಅಂಗಡಿಯ ಪಕ್ಕದ ಲಾಡ್ಜ್‌ನಲ್ಲಿ ಒಂದು ವಾರ ತಂಗಿದ್ದು, ಅಂಗಡಿಯ ಒಳ ವಿನ್ಯಾಸ, ಚಲನವಲನ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಗಮನಿಸಿದ್ದ. ನಂತರ ರಾತ್ರಿ ವೇಳೆ ಗ್ಯಾಸ್ ಕಟರ್ ಮೂಲಕ ಮೂರನೇ ಮಹಡಿಯ ಕಿಟಕಿಯ ಕಬ್ಬಿಣದ ಸರಳಿಗಳನ್ನು ಕತ್ತರಿಸಿ ಅಂಗಡಿಯೊಳಗೆ ನುಗ್ಗಿದ್ದ.

ಅವನು ಕದ್ದದ್ದು:..

76.810 ಗ್ರಾಂ ಬಂಗಾರ (ಸುಮಾರು ₹10.16 ಲಕ್ಷ)
33,055 ಗ್ರಾಂ ಬೆಳ್ಳಿ (ಸುಮಾರು ₹61.09 ಲಕ್ಷ)
₹8.9 ಲಕ್ಷ ಮೌಲ್ಯದ ವಜ್ರ ಹರಳುಗಳು
₹26,000 ನಗದು ಒಟ್ಟು ಮೌಲ್ಯ: ₹80,47,028

ಕಳವು ನಡೆಸಿದ ನಂತರ ಆರೋಪಿ ತಕ್ಷಣ ಮಹಾರಾಷ್ಟ್ರ ದಿಕ್ಕಿಗೆ ಓಡಿಹೋಗಿದ್ದಾನೆ.

ಸಿಸಿಟಿವಿ—ಲಾಡ್ಜ್ ದಾಖಲೆ—ವೇಗದ ಕಾರ್ಯಾಚರಣೆ

ಕಳವು ಬೆಳಕಿಗೆ ಬಂದ ತಕ್ಷಣ ಗದಗ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು.
ಲಾಡ್ಜ್‌ನ ನೋಂದಣಿ ದಾಖಲೆ, ಸಿಸಿಟಿವಿ ದೃಶ್ಯಾವಳಿ ಮತ್ತು ಹತ್ತಿರದ ರಸ್ತೆ ಕ್ಯಾಮೆರಾ ಫೂಟೇಜ್ ಆಧರಿಸಿ ಆರೋಪಿ ಮಹಾರಾಷ್ಟ್ರಕ್ಕೆ ಓಡಿಹೋದ ಮಾಹಿತಿ ಲಭಿಸಿದೆ.

ಸೊಲಾಪುರ ಮತ್ತು ಸಾಂಗ್ಲಿ ಪೊಲೀಸರ ಸಹಕಾರದಲ್ಲಿ, ಕಿನ್ನಿ ನಾಕಾದ ಬಳಿ ಮಹಮ್ಮದ ಹುಸೇನನ್ನು ಹಿಡಿದರು. ಕಳವುಗೈದ ವಸ್ತುಗಳನ್ನೆಲ್ಲಾ ಆರೋಪಿ ಬಳಿ ಇದ್ದ ಚೀಲದಲ್ಲೇ ಪತ್ತೆ ಹಚ್ಚಿದರು. ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟರ್ ಮತ್ತು ಇತರೆ ಸಾಧನಗಳನ್ನೂ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡ

ಡಿಎಸ್‌ಪಿ ಮುರ್ತುಜಾ ಖಾದ್ರಿ ನೇತೃತ್ವದ ತಂಡದೊಂದಿಗೆ,
ಸಿಇಎನ್ ಡಿಎಸ್‌ಪಿ ಮಹಾಂತೇಶ ಸಜ್ಜನ, ಸಿಪಿಐ ಎಲ್‌.ಕೆ. ಜೂಲಕಟ್ಟಿ, ಧೀರಜ್ ಸಿಂಧೆ, ಪಿಐ ಸಿದ್ರಾಮೇಶ್ವರ ಗಡೇದ ಹಾಗೂ ಹಲವು ಪೊಲೀಸರ ತಂಡ ಈ ಶೋಧ ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದಾರೆ.

ಜಿಲ್ಲಾ ಎಸ್‌ಪಿ ರೋಹನ್ ಜಗದೀಶ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ವಿವರ ನೀಡಿ, ದಾಖಲೆಯ ವೇಗದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ತಂಡದ ಒಗ್ಗಟ್ಟಿನ ಸಾಧನೆ ಎಂದಿದ್ದಾರೆ.

Related posts