ಮೆಕ್ಕೆಜೋಳ ಖರೀದಿ ಮಿತಿಯನ್ನು 50 ಕ್ವಿಂಟಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ – ಹಾವೇರಿಯಲ್ಲಿ ರೈತರ ಹರ್ಷೋದ್ಗಾರ..
ಮೆಕ್ಕೆಜೋಳ ಖರೀದಿ ಮಿತಿಯನ್ನು 50 ಕ್ವಿಂಟಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ – ಹಾವೇರಿಯಲ್ಲಿ ರೈತರ ಹರ್ಷೋದ್ಗಾರ
ಹಾವೇರಿ: ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆಗಾರರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ, ಬೆಂಬಲ ಬೆಲೆಯಡಿ (MSP) ಪ್ರತಿ ರೈತನಿಂದ ಖರೀದಿಸುವ ಮೆಕ್ಕೆಜೋಳ ಪ್ರಮಾಣವನ್ನು 20 ಕ್ವಿಂಟಲ್‌ನಿಂದ 50 ಕ್ವಿಂಟಲ್‌ಗೆ ಹೆಚ್ಚಿಸುವ ಆದೇಶವನ್ನು ಭಾನುವಾರ ಹೊರಡಿಸಿದೆ. ಈ ನಿರ್ಧಾರದಿಂದ ಹಾವೇರಿಯನ್ನು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಹಾವೇರಿ ಜಿಲ್ಲೆಯಲ್ಲಿ ಮಾತ್ರವೇ ಈ ವರ್ಷ 2 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾದ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿತ್ತು. ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯಗಳಿಂದ ಹಾನಿಯಾದರೂ ಸುಮಾರು 15 ಲಕ್ಷ ಟನ್‌ಗಿಂತ ಹೆಚ್ಚು ಮೆಕ್ಕೆಜೋಳ ಉತ್ಪಾದನೆ ದಾಖಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಆಕಸ್ಮಿಕ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳ ನೇತೃತ್ವದಲ್ಲಿ ಹಾವೇರಿ ಡಿಸಿ ಕಚೇರಿ ಹಾಗೂ ಎಂಟು ತಾಲೂಕು ತಹಸೀಲ್ದಾರ್ ಕಚೇರಿಗಳ ಎದುರು ಬೃಹತ್ ಧರಣಿ ನಡೆಸಲಾಗಿತ್ತು. ಜೊತೆಗೆ ಡಿ.8ರಂದು ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆಯೂ ನೀಡಲಾಗಿತ್ತು.
ಜಿಲ್ಲಾಡಳಿತವು ಈಗಾಗಲೇ ಪ್ರತಿ ಕ್ವಿಂಟಲ್‌ಗೆ ₹2,400ರ MSP ದರದಲ್ಲಿ 20 ಕ್ವಿಂಟಲ್‌ಗಳ ಖರೀದಿ ಪ್ರಕ್ರಿಯೆ ಆರಂಭಿಸಿತ್ತು. ಆದರೆ ರೈತರು ಪ್ರತಿ ರೈತನಿಂದ 100 ಕ್ವಿಂಟಲ್ ಖರೀದಿ ಹಾಗೂ ₹3,000 MSP ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಇದರ ನಡುವೆಯೇ ಸರ್ಕಾರ ಕನಿಷ್ಟವಾಗಿ 50 ಕ್ವಿಂಟಲ್ ಖರೀದಿಗೆ ಒಪ್ಪಿಕೊಂಡಿದೆ.
ಮುಖ್ಯಮಂತ್ರಿಗಳ ನಿರ್ದೇಶನದ ನಂತರ, ಖರೀದಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯವನ್ನು ವೇಗಗೊಳಿಸಲಾಗಿದ್ದು, ರೈತರ ಆತಂಕಕ್ಕೆ ತಾತ್ಕಾಲಿಕ ಅಂತ್ಯವಾಯಿತು.
ಆದೇಶ ಹೊರಬಂದ ಕೂಡಲೇ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಸಂಭ್ರಮಾಚರಣೆ ನಡೆಸಿದ್ದು, ಸಮೂಹ ನಾಯಕತ್ವದ ರೈತ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇದಲ್ಲದೆ, ಹಲವು ಸಂಘಟನೆಗಳ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ, ಹನುಮಂತಪ್ಪ ಕಬ್ಬಾರ, ಮತ್ತು ಇನ್ನಿತರ ಸಾವಿರಾರು ರೈತರು ಖರೀದಿ ಮಿತಿ ಹೆಚ್ಚಳವನ್ನು ‘ರೈತರ ಗೆಲುವು’ ಎಂದು ಹೇಳಿದ್ದಾರೆ.

