ದೊಡ್ಡಬಳ್ಳಾಪುರ ಸೀರೆ ನಕಲು ತಡೆಗೆ ಸರ್ಕಾರದ ಮುಂದಾಳುತ್ವ — ಜಿಐ ಟ್ಯಾಗ್‌ಗಾಗಿ ಪ್ರಸ್ತಾವನೆ ಸಲ್ಲಿಕೆ
ದೊಡ್ಡಬಳ್ಳಾಪುರ ಸೀರೆ ನಕಲು ತಡೆಗೆ ಸರ್ಕಾರದ ಮುಂದಾಳುತ್ವ — ಜಿಐ ಟ್ಯಾಗ್‌ಗಾಗಿ ಪ್ರಸ್ತಾವನೆ ಸಲ್ಲಿಕೆ
ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳ ವೈಶಿಷ್ಟ್ಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸ್ಥಳೀಯ ನೇಕಾರರು ಹೆಮ್ಮೆಪಡುವ ಈ ಸೀರೆಗಳ ವಿನ್ಯಾಸವನ್ನು ಸೂರತ್‌ನ ಮಿಲ್‌ಗಳಲ್ಲಿ ನಕಲು ಮಾಡಿ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಜಿಐ (Geographical Indication) ಟ್ಯಾಗ್ ಪಡೆಯಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಾಗಿಸಲಿರುವುದಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ತಿಳಿಸಿದೆ.
ದೊಡ್ಡಬಳ್ಳಾಪುರ ಸೀರೆ ವಿನ್ಯಾಸ ನಕಲು ತಡೆಗೆ ಜಿಐ ಟ್ಯಾಗ್ ಪ್ರಸ್ತಾವನೆ. ಸೂರತ್ ಮಿಲ್‌ಗಳಿಂದ ಬರುತ್ತಿರುವ ನಕಲಿ ಸೀರೆಗಳ ಹೊಡೆತ. ನೇಕಾರರ ಬೇಡಿಕೆಗಳನ್ನು ಆಲಿಸಲು ಸಂವಾದ ಸಭೆ.ಸೀರೆಗಳಿಗೆ ಬ್ರ್ಯಾಂಡ್ ನಿರ್ಮಾಣ ಅಗತ್ಯ ಎಂದು ಜವಳಿ ಇಲಾಖೆ ಅಭಿಪ್ರಾಯ.
ಸೂರತ್‌ನ ಮಿಲ್‌ಗಳಿಂದ ನಕಲು—ಸ್ಥಳೀಯ ಮಾರುಕಟ್ಟೆಗೆ ಹೊಡೆತ
ದೊಡ್ಡಬಳ್ಳಾಪುರದಲ್ಲಿ ತಯಾರಾಗುವ ಸಾಂಪ್ರದಾಯಿಕ ಸೀರೆಗಳನ್ನು ಆಧುನಿಕ ಯಾಂತ್ರಿಕ ಮಗ್ಗಗಳಲ್ಲಿ ಸೂರತ್ ಮಿಲ್‌ಗಳು ನಕಲು ಮಾಡಿ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಿವೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ಸೀರೆಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವುದರಿಂದ ಮೂಲ ಸೀರೆಗಳ ಬೇಡಿಕೆ ಕುಸಿಯುತ್ತಿದೆ ಎಂದು ನೇಕಾರರು ತಿಳಿಸಿದ್ದಾರೆ.
ಹಳೆಯ ಬೇಡಿಕೆಯೊಂದಿಗೆ ಹೋಲಿಸಿದರೆ ಈಗ ಕೇವಲ 20–25% ಸೀರೆಗಳು ಮಾತ್ರ ಮಾರಾಟವಾಗುತ್ತಿವೆ, ಬಿಕ್ಕಟ್ಟು ಇನ್ನಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ.
ಜಿಐ ಟ್ಯಾಗ್ — ನಕಲು ತಡೆಯಲು ಪರಿಣಾಮಕಾರಿ ಹೆಜ್ಜೆ..
ನೇಕಾರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ನಿರ್ದೇಶಕ ಯೋಗೇಶ್ ಅವರು,
“ಜಿಐ ಟ್ಯಾಗ್ ಬಂದರೆ ದೊಡ್ಡಬಳ್ಳಾಪುರ ಸೀರೆಗಳ ವಿನ್ಯಾಸವನ್ನು ಬೇರೆಡೆ ನಕಲು ಮಾಡುವುದು ಕಾನೂನುಬದ್ಧವಾಗಿ ಸಾಧ್ಯವಾಗುವುದಿಲ್ಲ. ಇದು ನೇಕಾರರಿಗೆ ಹೊಸ ಮಾರುಕಟ್ಟೆ, ಪ್ರತ್ಯೇಕ ಗುರುತನ್ನು ನೀಡುತ್ತದೆ” ಎಂದು ತಿಳಿಸಿದರು.
ಅದರ ಜೊತೆಗೆ, ದೊಡ್ಡಬಳ್ಳಾಪುರ ಸೀರೆಗಳಿಗೆ ಬ್ರ್ಯಾಂಡ್ ನಿರ್ಮಾಣ ಮಾಡಿದರೆ ಮಾರುಕಟ್ಟೆಯ ಸ್ಪರ್ಧೆಗೆ ಎದುರಾಗಿ ಬದುಕುಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನೇಕಾರರ ಆತಂಕ—ಉದ್ಯಮದ ಭವಿಷ್ಯದ ಪ್ರಶ್ನೆ..
ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತ್ ರಾಜು ಅವರು, “ಆಧುನಿಕ ಮಗ್ಗಗಳ ವೇಗದ ಉತ್ಪಾದನೆಯನ್ನು ನಾವು ಎದುರಿಸಲು ಸಾಧ್ಯವಾಗುತ್ತಿಲ್ಲ. ಸೂರತ್‌ನ ಸೀರೆಗಳ ಹೊಡೆತ ಮುಂದುವರಿದರೆ ನಮ್ಮ ಉದ್ಯಮದ ಅಸ್ತಿತ್ವವೇ ಪ್ರಶ್ನೆಯಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಲಾಳಿ ರಹಿತ (modern) ಮಗ್ಗಗಳ ವಿರುದ್ಧ ಸ್ಪರ್ಧಿಸಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದ್ದು, ಸರ್ಕಾರದ ಮಧ್ಯಸ್ಥಿಕೆ ಮಾತ್ರ ಉದ್ಯಮವನ್ನು ಉಳಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ನೇಕಾರರ ಪ್ರಮುಖ ಮನವಿಗಳು… ಆಧುನಿಕ ಮಗ್ಗಗಳಲ್ಲಿ ತಯಾರಾದ ಸೀರೆಗಳ ನಕಲು ತಡೆಗೆ ಕಠಿಣ ಕ್ರಮ. ಉದ್ಯಮದ ಸ್ಥಿತಿ ಕುರಿತು ಸಮಗ್ರ ಸರ್ವೇ ಮಾಡಿ ಪ್ರೋತ್ಸಾಹಧನ ನೀಡುವುದು. ವಿದ್ಯುತ್ ಮಗ್ಗ ಮೀಸಲಾತಿ ಕಾಯ್ದೆಗೆ ಬಲ ನೀಡುವ ಕ್ರಮ.ಹೆಚ್ಚಿನ ಮಗ್ಗಗಳಲ್ಲಿ ತಯಾರಾದ ನಕಲಿ ಸೀರೆಗಳು ಮಾರುಕಟ್ಟೆಗೆ ಬರದಂತೆ ನಿಯಂತ್ರಣ.
ಜವಳಿ ಇಲಾಖೆ ಶೀಘ್ರದಲ್ಲೇ ನೇಕಾರರ ಬೇಡಿಕೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದೆ. ಜಿಐ ಟ್ಯಾಗ್ ಮತ್ತು ಬ್ರ್ಯಾಂಡ್ ನೋಂದಣಿಯ ಮೂಲಕ ದೊಡ್ಡಬಳ್ಳಾಪುರ ಸೀರೆಗಳಿಗೆ ಪಾರಂಪರ್ಯ ಹಾಗೂ ಮಾರುಕಟ್ಟೆ ಮೌಲ್ಯವನ್ನು ಉಳಿಸುವತ್ತ ಸರ್ಕಾರ ಗಂಭೀರವಾಗಿದೆ.

