ಸುದ್ದಿ 

ಚಿಕ್ಕಬಳ್ಳಾಪುರ ವೀರಾಂಜನೇಯ ಸನ್ನಿಧಿಯಲ್ಲಿ ಕಡಲೆಕಾಯಿ ಪರಿಷೆಗೆ ಚುಂಚಶ್ರೀಗಳ ಚಾಲನೆ

Taluknewsmedia.com

ಚಿಕ್ಕಬಳ್ಳಾಪುರ ವೀರಾಂಜನೇಯ ಸನ್ನಿಧಿಯಲ್ಲಿ ಕಡಲೆಕಾಯಿ ಪರಿಷೆಗೆ ಚುಂಚಶ್ರೀಗಳ ಚಾಲನೆ
ವಾರ್ಷಿಕ ಜಾತ್ರಾ ಮಹೋತ್ಸವ ಭಕ್ತರ ಸಂಭ್ರಮದ ನಡುವೆ ವೈಭವವಾಗಿ

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿರುವ ಆದಿಚುಂಚನಗಿರಿ ಶಾಖಾ ಮಠ ಎದುರಿನ ಸೂಳಾಲಪ್ಪ ದುಗ್ಗಣಹಳ್ಳಿಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಪ್ರಸಿದ್ಧ ಕಡಲೆಕಾಯಿ ಪರಿಷೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ಭಕ್ತರ ಸಂಚಾರ ಹೆಚ್ಚಿರುವ ಜಾತ್ರಾ ಕ್ಷೇತ್ರದಲ್ಲಿ ಮೊದಲು ಜಡಲತಿಮ್ಮನಹಳ್ಳಿ ಗ್ರಾಮದಿಂದ ಅಲಂಕರಿಸಲಾದ ವೀರಾಂಜನೇಯ ದೇವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಬೆಂಗಳೂರು ರಸ್ತೆಯ ಮೂಲಕ ಸಾಗಿದ ಈ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ ಹಾಗೂ ಹಲವು ಜಾನಪದ ಕಲಾತಂಡಗಳ ನೃತ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ನಂತರ ಪಲ್ಲಕ್ಕಿಯನ್ನು ಶಾಖಾ ಮಠವರೆಗೆ ತೆಗೆದುಕೊಂಡು ಬಂದು ದೇವಾಲಯದ ಮುಂಬಾಗದವರೆಗೆ ಮೆರವಣಿಗೆ ನೆರವೇರಿಸಲಾಯಿತು.

ತದನಂತರ ಪಲ್ಲಕ್ಕಿಯಿಂದ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವದ ನಂತರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಭಕ್ತರಲ್ಲಿ ಕಡಲೆಕಾಯಿ ಪೊಟ್ಟಣಗಳನ್ನು ವಿತರಿಸುವ ಮೂಲಕ ಕಡಲೆಕಾಯಿ ಪರಿಷೆಗೆ ಚಾರ್ಮಭವಾಯಿತು. ನಗರದ ವಿವಿಧ ಪ್ರದೇಶಗಳು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ದೊಡ್ಡ ಪ್ರಮಾಣದಲ್ಲಿ ಆಗಮಿಸಿದ ಭಕ್ತರು ಭಕ್ತಿ, ಭಾವದೊಂದಿಗೆ ಪರಿಷೆಯಲ್ಲಿ ಭಾಗವಹಿಸಿದರು.

ಪ್ರತಿ ವರ್ಷ ಹನುಮ ಜಯಂತಿಯ ವೇಳೆ ವಿಶೇಷವಾಗಿ ಆಯೋಜಿಸಲಾಗುವ ಕಡಲೆಕಾಯಿ ಪರಿಷೆಗೆ ಬೇರೆ ಬೇರೆ ಭಾಗಗಳಿಂದ ಗ್ರಾಮಸ್ಥರು ಕಡಲೆಕಾಯಿ ಮಾರಾಟಕ್ಕೂ, ಸೇವಾ ಧರ್ಮಕ್ಕಾಗಿ ಉಚಿತ ವಿತರಣೆಯ ಕಾರ್ಯಕ್ಕೂ ಆಗಮಿಸುತ್ತಾರೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.

ಜಾತ್ರಾ ಸಂದರ್ಭದಲ್ಲಿ ಬೆಳಿಗ್ಗೆ 7 ಗಂಟೆಗೆ ಬಾಲಗಂಗಾಧರನಾಥ ಸ್ವಾಮೀಜಿ ಭಜನಾ ಮಂಡಳಿ ಭಜನೆ ಕಾರ್ಯಕ್ರಮಗಳನ್ನು ನಡೆಸಿತು. ನಂತರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಸಾಯಿ ಕೀರ್ತಿನಾಥ ಸ್ವಾಮೀಜಿ ಹಾಗೂ ತಂಡದಿಂದ ಭಕ್ತಿಗೀತೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2ರಿಂದ 4ರವರೆಗೆ ಶಾಖಾ ಮಠ ಮತ್ತು ಜಡಲತಿಮ್ಮನಹಳ್ಳಿ ಗ್ರಾಮಸ್ಥರಿಂದ ದೇವರ ಉತ್ಸವ ಹಾಗೂ ಪಾನಕ ಸೇವೆ ನಡೆಸಲಾಯಿತು. ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಭಕ್ತಿಗಾನ ಕಾರ್ಯಕ್ರಮಗಳು ಜಾತ್ರಾ ಸಂಭ್ರಮಕ್ಕೆ ಮತ್ತಷ್ಟು ರಂಜನೆ ನೀಡಿದವು.

ಪರಿಷೆಗೆ ಪೂರ್ವಭಾವಿಯಾಗಿ ಸುಮಂಗಲಿಯರು ತಂಬಿಟ್ಟಿನ ಆರತಿ ಪೂಜೆ ಸಲ್ಲಿಸಿದರು. ಸಂಜೆ ನಡೆದ ಬ್ರಹ್ಮರಥೋತ್ಸವದಲ್ಲಿ ಜಾನಪದ ಕಲಾತಂಡಗಳ ಕುಣಿತ ವಿಶೇಷ ಮೆರುಗು ನೀಡಿತು. ಭಕ್ತರಿಗಾಗಿ ಪಾನಕ, ಪನ್ನೀರು ಹಾಗೂ ತೀರ್ಥಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ, ಶಂಕರ್, ಶಿಕ್ಷಣ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಡಾ. ಎನ್. ಶಿವರಾಮರೆಡ್ಡಿ, ಎಸ್‌ಜೆಸಿಐಟಿ ಪ್ರಾಚಾರ್ಯ ಡಾ. ಜಿ.ಟಿ. ರಾಜು, ಆಡಳಿತಾಧಿಕಾರಿ ರಂಗಸ್ವಾಮಿ, ಕುಲಸಚಿವ ಜೆ. ಸುರೇಶ್, ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ. ಮೋಹನ್ ಕುಮಾರ್ ಸೇರಿದಂತೆ ಭೋಧಕ–ಬೋಧಕೇತರ ಸಿಬ್ಬಂದಿ, ವಿವಿಧ ಶಾಖಾಮಠಗಳ ಸ್ವಾಮೀಜಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಕ್ತಿಭಾವದಿಂದ ಭಾಗವಹಿಸಿದರು.

ಅಂತಿಮವಾಗಿ, ಚುಂಚಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ, ಸಮಸ್ತರ ಕಲ್ಯಾಣಕ್ಕೆ ಪ್ರಾರ್ಥಿಸಿದರು.

Related posts