ಕಿನ್ನಿ ಟೋಲ್ ಬಳಿ ಅಂತರಾಜ್ಯ ಕಳ್ಳನ ಬಂಧನ – ಗದಗ ಪೊಲೀಸರಿಂದ ಚುರುಕಿನ ಕಾರ್ಯಾಚರಣೆ**
ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ 24 ಗಂಟೆಯಲ್ಲಿ ತೆರೆ!
ಕಿನ್ನಿ ಟೋಲ್ ಬಳಿ ಅಂತರಾಜ್ಯ ಕಳ್ಳನ ಬಂಧನ – ಗದಗ ಪೊಲೀಸರಿಂದ ಚುರುಕಿನ ಕಾರ್ಯಾಚರಣೆ
ಗದಗ:ನಗರದ ಖಾಸಗಿ ಜ್ಯುವೆಲರಿ ಮಳಿಗೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದ ಭಾರಿ ಮಟ್ಟದ ಕಳ್ಳತನ ಪ್ರಕರಣದಲ್ಲಿ ಗದಗ ಪೊಲೀಸರು ಕೇವಲ ಒಂದು ದಿನದೊಳಗೆ ಅಪರಾಧಿಯನ್ನು ಹಿಡಿದುಕೊಂಡು ಸಿನೆಮಾ ಶೈಲಿಯ ಆಪರೇಷನ್ ನಡೆಸಿದ್ದಾರೆ. 80 ಲಕ್ಷ ರೂ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿ ಮಹ್ಮದ್ ಸಿದ್ಧಿಕಿ (43) ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕಿನ್ನಿ ಟೋಲ್ ಗೇಟ್ ಬಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲಿನಿಂದಲೇ ಚುರುಕಿನ ನಿಗಾವಹಣೆ..
ಗುಜರಾತ್‌ನ ಅಹಮದಾಬಾದ್ ಮೂಲದ ಸಿದ್ಧಿಕಿ ಕಳೆದ ಕೆಲವು ದಿನಗಳಿಂದ ಜ್ಯುವೆಲರಿ ಅಂಗಡಿಯ ಹಿಂಭಾಗದ ಲಾಡ್ಜ್‌ನಲ್ಲಿ ತಂಗಿದ್ದ ಮಾಹಿತಿ ಸಿಸಿ ಕ್ಯಾಮೆರಾ ಪರಿಶೀಲನೆಯಲ್ಲಿ ಪೊಲೀಸರಿಗೆ ಬಿದ್ದಿತ್ತು. ಅಂಗಡಿಯ ಮಾಲೀಕರು ದೂರು ನೀಡುವಷ್ಟರಲ್ಲೇ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದರು.
ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಿಂದ ಸಿಕ್ಕ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಬಸ್ ಮೂಲಕ ಪುಣೆ ದಿಕ್ಕಿಗೆ ಹೊರಟಿರುವುದು ಪತ್ತೆಯಾದ ತಕ್ಷಣ ಗದಗ ಪೊಲೀಸರು ಸೊಲ್ಲಾಪುರ ಹಾಗೂ ಸಾಂಗ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಹಂಚಿದ್ದರು. ಬಳಿಕ ವಡಗಾಂ ಪೊಲೀಸ್ ಠಾಣೆ ಸಿಬ್ಬಂದಿ ಕಿನ್ನಿ ಟೋಲ್ ಬಳಿ ಬಸ್‌ನ್ನು ತಡೆದು ಆರೋಪಿ ಹಾಗೂ ಆಭರಣಗಳನ್ನು ವಶಪಡಿಸಿಕೊಂಡರು.
ಗದಗ ಜಿಲ್ಲಾ ಪೊಲೀಸ್ ತಂಡ ತಕ್ಷಣ ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನಗರಕ್ಕೆ ಕರೆತರಿತು.
ಕಳ್ಳತನದ ವಿಧಾನ – ಹೈಟೆಕ್ ಸಾಧನಗಳ ಬಳಕೆ
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ನೀಡಿದ ವಿವರಗಳ ಪ್ರಕಾರ:
ಲಾಡ್ಜ್ ಹಿಂಭಾಗದ ಕಿಟಕಿ ಮಾರ್ಗವಾಗಿ ಜ್ಯುವೆಲರಿ ಶಾಪ್‌ನ ಎರಡನೇ ಮಹಡಿಗೆ ಪ್ರವೇಶ. ಗ್ಯಾಸ ಕಟರ್, ಹೈಡ್ರಾಲಿಕ್ ಕಟರ್ ಹಾಗೂ ಬಲವಾದ ಸುತ್ತಿಗೆಯ ನೆರವಿನಿಂದ ಕಬ್ಬಿಣದ ಕಿಟಕಿಯನ್ನು ಪುಡಿಗೈದು ಒಳನುಗ್ಗುವ ತಂತ್ರ.ಮೊದಲು ಸಿಸಿ ಕ್ಯಾಮೆರಾಗಳನ್ನು ಹಾನಿಗೊಳಿಸಿ, ನಂತರ ಟ್ರೆಸರಿ ಒಡೆಯಲು ಯತ್ನ
ಟ್ರೆಸರಿ ಒಡೆಯುವಲ್ಲಿ ವಿಫಲವಾದಾಗ ಪ್ರದರ್ಶನಕ್ಕೆ ಇಟ್ಟಿದ್ದ ಚಿನ್ನ–ಬೆಳ್ಳಿ ಆಭರಣಗಳ ಕಳವು..
ಲಾಡ್ಜ್ ರೆಜಿಸ್ಟರ್‌ನಲ್ಲಿ ತನ್ನ ವಿಳಾಸವನ್ನು ತಿದ್ದಿ ಸುಳಿವು ಮಾಸಿಸುವ ಪ್ರಯತ್ನ.ನಂತರವೇ ಪುಣೆ ಬಸ್ ಹಿಡಿದು ಪರಾರಿಯಾಗಿರುವುದು. ಎಲ್ಲಾ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು….
ಪೊಲೀಸರು ಒಟ್ಟು ₹80,21,028 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ:
₹10,16,200 ಮೌಲ್ಯದ 76.80 ಗ್ರಾಂ ಚಿನ್ನಾಭರಣ
₹61,09,828 ಮೌಲ್ಯದ ಬೆಳ್ಳಿಯ ಆಭರಣಗಳು
₹8,95,000 ಮೌಲ್ಯದ ಜೆಮ್ ಸ್ಟೋನ್ಸ್
₹26,000 ನಗದು
ಸುದ್ದಿಗೋಷ್ಠಿಯಲ್ಲಿ ಇದ್ದವರು…
ಪೊಲೀಸ್ ಅಧಿಕಾರಿಗಳಾದ ಮಹಾಂತೇಶ ಸಜ್ಜನ, ಎಲ್.ಕೆ. ಜೂಲಕಟ್ಟಿ, ಮುರ್ತುಜಾ ಖಾದ್ರಿ, ಧೀರಜ್ ಸಿಂಧೆ, ಸಿದ್ರಾಮೇಶ್ವರ ಗಡದ, ಆರ್.ಆರ್. ಮುಂಡೆವಾಡಗಿ ಸೇರಿದಂತೆ ಅನೇಕ ಸಿಬ್ಬಂದಿಗಳು ಹಾಜರಿದ್ದರು.

