ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಅಕ್ರಮ ನೇಮಕಾತಿ.?
ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ಅಕ್ರಮ ನೇಮಕಾತಿ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಅದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಚ್ಚಿಸುತ್ತೇನೆ. ಮಾನ್ಯರೇ ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2022-23ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯದ ಸ್ನಾತಕ್ಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ವಿವಿಯ ಪರಿಷ್ಕೃತ ಕಛೇರಿ ಆದೇಶ ಪತ್ರದ ಉಲ್ಲೇಖ(1) ಅನ್ವಯ ಶ್ರೀ ಅಭಿಷೇಕ್ ಎಂ.ವಿ. ಅವರನ್ನು ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಲು ಆದೇಶಿಸಲಾಗಿತ್ತು. ಆದರೆ ಉಲ್ಲೇಖ(2) ರ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಮನವಿ ಮೇರೆಗೆ ಸಿಂಡಿಕೇಟ್ ಸಭಾ ನಿರ್ಣಯ ಕಾಯ್ದಿರಿಸಿದಂತೆ ಹಾಗೂ ಉಲ್ಲೇಖ(3)ರ ಅನುಮೋದನೆ ಮೇರೆಗೆ ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕಛೇರಿಗೆ ನೆರವಾಗಲು ಹಾಗೂ ಇವರನ್ನು ತಾಂತ್ರಿಕ ಸಹಾಯಕರನ್ನಾಗಿ ರೂ 28,000/- ಗಳ ವೇತನ ದೊಂದಿಗೆ ನೇಮಿಸಲು ದಿನಾಂಕ 30-12-2022ರಂದು ಆದೇಶ ಹೊರಡಿಸಲಾಗಿದೆ.
ಆದರೆ ಈ ಮೇಲೆ ಉಲ್ಲೇಖಿಸಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಾಣಸಿಗುತ್ತದೆ. ಮೇಲೆ ತಿಳಿಸಿರುವ ತಾಂತ್ರಿಕ ಸಹಾಯಕ ಅಭಿಷೇಕ್ ಎಂ.ವಿ ತನ್ನ ಸ್ನಾತಕ್ಕೋತ್ತರ ಪದವಿಯನ್ನು ಪೂರೈಸುವುದಕ್ಕೂ ಮೊದಲೇ ಆತನನ್ನು ನೇಮಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಭಿಷೇಕ್ ಎಂ.ವಿ ಎಂಬ ವ್ಯಕ್ತಿ ತಮ್ಮ ಸ್ನಾತಕ್ಕೋತ್ತರ ಸಮೂಹ ಸಂವಹ ಮತ್ತು ಪತ್ರಿಕೋದ್ಯಮ ಪದವಿಯನ್ನು ಅದೇ ವಿಶ್ವವಿದ್ಯಾನಿಲಯದಲ್ಲಿ 2021-22 ನೇ ಸಾಲಿನಲ್ಲಿ ಅಧ್ಯಯನ ಮಾಡಿ ಅವೇ ವೇಳೆಗೆ ಪೂರೈಸಿರುತ್ತಾನೆ. ಆದರೆ ಅವರ ಫಲಿತಾಂಶವನ್ನು ವಿಶ್ವವಿದ್ಯಾನಿಲಯವು ದಿನಾಂಕ 30-12-2022 ರಂದು ಬಿಡುಗಡೆ ಮಾಡಿದೆ. ಅಂದೇ ಫಲಿತಾಂಶ ಅಂದೇ ಅವನ ನೇಮಕಾತಿಯ ಆದೇಶವನ್ನು ಹೊರಡಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಫಲಿತಾಂಶ ಬಿಡುಗಡೆಗೂ ಮುನ್ನವೇ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ಉಲ್ಲೇಖ(2) ರಲ್ಲಿ ತಿಳಿಸಿರುವಂತೆ ಈ ವ್ಯಕ್ತಿಯ ನೇಮಕಾತಿಯ ಆದೇಶವನ್ನು ಸಿಂಡಿಕೆಟ್ ಸಭೆಯಲ್ಲಿ ಯಾವುದೇ ಪ್ರಸ್ತಾಪ ಮಾಡದೇಯೇ ಏಕಾ ಏಕಿ ನೇಮಕ ಮಾಡಿಕೊಳ್ಳಲಾಗಿದೆ.
ಇನ್ನು ಅತಿಥಿ ಉಪನ್ಯಾಸಕನಾಗಿ ವಿವಿ ನೇಮಕ ಮಾಡಿಕೊಳ್ಳಲು ನಿಗಧಿತ ನಿಯಮಾವಳಿಗಳನ್ನು ಅನುಸರಿಸಬೇಕಿತ್ತು. ವಿವಿಯು 2022-23 ನೇ ಶೈಕ್ಷಣಿಕ ಸಾಲಿಗೆ ದಿನಾಂಕ 13-11-2022 ರಂದು 21 ಸ್ನಾತಕ್ಕೋತ್ತರ ವಿಭಾಗಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿತ್ತು. ಅದರಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ 11 ಜನ ಅಭ್ಯರ್ಥಿಗಳು ಅರ್ಜಿ ಹಾಕಿರುತ್ತಾರೆ. ಅರ್ಜಿ ಹಾಕಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಭಿಷೇಕ್ ಎಂ.ವಿ ಅವನ ಹೆಸರು ಇಲ್ಲ. ಆದರೂ ಅವರನ್ನು ಈ ವಿಭಾಗಕ್ಕೆ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ದಿನಾಂಕ 27-12-2022ರಂದು ಅದೇಶ ಹೊರಡಿಸಲಾಗಿತ್ತು. ನಂತರ ಆ ಉಲ್ಲೇಖ(1)ಅನ್ನು ತಡೆ ಹಿಡಿದು ಅವನನ್ನು ಮಾಹೆಯ ರೂ 28,000/- ಗಳ ವೇತನದೊಂದಿಗೆ ತಾಂತ್ರಿಕ ಸಹಾಯಕರನ್ನಾಗಿ ಅದೇ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಾಗಿದೆ.

ಈ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ವಿಶ್ವವಿದ್ಯಾನಿಲಯ ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸದೇ ಗೌಪ್ಯವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಒಂದು ಬಾರಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ಮತ್ತೊಮ್ಮೆ ತಾಂತ್ರಿಕ ಸಹಾಯಕರನ್ನಾಗಿ ತರಾತುರಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅವಶ್ಯಕತೆ ಇಲ್ಲದಿದ್ದರೂ ತಾಂತ್ರಿಕ ಸಹಾಯಕ ಎಂಬ ಒಂದು ಹುದ್ದೆಯನ್ನು ಸೃಷ್ಟಿ ಮಾಡಿ ಅಭಿಷೇಕ್ ಎಂ.ವಿ ಅವನನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಅಭಿಷೇಕ್ ಎಂ.ವಿ ವಿವಿಯ ಕುಲಪತಿಗಳಿಗೆ ಮತ್ತು ವಿಭಾಗದ ಮುಖ್ಯಸ್ಥರಿಗೆ ಲಂಚವನ್ನು ನೀಡಿ ಹುದ್ದೆಯನ್ನು ಪಡೆದಿರುವ ಊಹಾ ಪೋಹಗಳ ಕೇಳಿ ಬರುತ್ತಿವೆ.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ನೆಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತಂತೆ ಕರ್ನಾಟಕದ ಪ್ರಸಿದ್ದ ಖಾಸಗೀ ದೈನಿಕ ಸುದ್ದಿ ಪತ್ರಿಕೆಯಾದ ವಿಜಯ ಕರ್ನಾಟಕದ ತುಮಕೂರು ಆವೃತ್ತಿಯಲ್ಲಿ ದಿನಾಂಕ 06-01-2023 ರಂದು ಸುದ್ದಿ ಪ್ರಕಟವಾಗಿರುತ್ತದೆ. ಆದರೂ ಕೂಡಾ ವಿವಿಯ ಕುಲಪತಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನೇಮಕಾತಿಯು ವಿವಿಯಲ್ಲಿ ಆಡಳಿತ ಕುಲಸಚಿವರು ಇಲ್ಲದಿದ್ದಾಗ ವಿವಿಯ ಪರೀಕ್ಷಾಂಗ ಕುಲಸಚಿವರೂ ಹಾಗೂ ಪ್ರಭಾರ ಕುಲಸಚಿವರಾಗಿದ್ದ ಪ್ರೊ ನಿರ್ಮಲ್ ರಾಜು ಅವರ ಅವಧಿಯಲ್ಲಿ ನಡೆದಿದ್ದು ಈ ಅಕ್ರಮ ನೇಮಕಾತಿಯಲ್ಲಿ ಪ್ರಸ್ತುತ ಕುಲಪತಿಗಳಾಗಿರುವ ಪ್ರೊ ಎಂ ವೆಂಕಟೇಶ್ವರಲು, ಪ್ರಭಾರ ಕುಲಸಚಿವರಾಗಿದ್ದ ಪ್ರೊ ನಿರ್ಮಲ್ ರಾಜು, ಹಾಗೂ ವಿವಿಯ ಸಾರ್ವಜನಿಕ ಸಂಪರ್ಕಕಾಧಿಕಾರಿಯಾದ ಡಾ. ಪದ್ಮನಾಭ ಕೆ.ವಿ ಹಾಗೂ ತಾಂತ್ರಿಕ ಸಹಾಯಕ ಹುದ್ದೆಯಲ್ಲಿರುವ ಅಭಿಷೇಕ್ ಎಂ. ವಿ ಇವರುಗಳ ಪೂರ್ವನಿಯೋಜಿತ ಕೃತ್ಯವಾಗಿದೆ.
ಇಲ್ಲಿ ಮೂಡುವ ಪ್ರಮುಖ ಪ್ರಶ್ನೆಗಳೆಂದರೆ
• 2022-23ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯದ ಸ್ನಾತಕ್ಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಭಿಷೇಕ್ ಎಂ.ವಿ ಈ ತನ ಹೆಸರು ಇಲ್ಲದಿದ್ದರೂ ಈತನನ್ನು ಯಾವ ಮಾನದಂಡಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆದೇಶಿಸಲಾಯಿತು ?
• ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿರುವ ಅಭ್ಯರ್ಥಿಯನ್ನು ಮೂರೇದಿನಗಳ ಅಂತರದಲ್ಲಿ ತಾಂತ್ರಿಕ ಸಹಾಯಕರನ್ನಾಗಿ ನೇಮಿಸಲು ಕಾರಣವೇನು ?
• ತಾಂತ್ರಿಕ ಸಹಾಯಕ ಹುದ್ದೆಗೆ ಅಭಿಷೇಕ್ ಎಂ.ವಿ. ಯನ್ನು ನೇಮಕ ಮಾಡಿ 28 ಸಾವಿರ ವೇತನ ನಿಗಧಿ ಮಾಡಲು ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದಕ್ಕೆ ಕಾರಣ ಏನು ?
• ಅಂದೇ ಫಲಿತಾಂಶ ಅಂದೇ ತಾಂತ್ರಿಕ ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿದೆ..!
• ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಸಹಾಯಕ ಹುದ್ದೆಯನ್ನು ಸೃಷ್ಟಿ ಮಾಡಿರುವ ಕಾರಣ ಏನು?
ಹೀಗೆ ನಾನಾ ಪ್ರಶ್ನೆಗಳು ವಿವಿಯ ಈ ನೆಮಕಾತಿಯಿಂದ ಮೂಡಿದ್ದು ಈ ಬಗ್ಗೆ ಸೂಕ್ತ ತನಿಖೆ ಮಾಡಿದರೆ ಮಾತ್ರ ಸತ್ಯಾಂಶ ಹೊರಬೀಳಲಿದೆ. ಈ ರೀತಿಯ ಅಕ್ರಮ ನೇಮಕಾತಿಗಳು ವಿಶ್ವವಿದ್ಯಾನಿಲಯದಲ್ಲಿ ಸಾಕಷ್ಟು ನಡೆದಿರುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಿತ್ತರವಾಗಿದ್ದರೂ ಯಾವುದೇ ಕ್ರಮ ಕೈಗೊಳದೆ ಬೇಜವಾಬ್ದಾರಿತನ ತೋರಿದ್ದಾರೆ. ಯಾವುದೇ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸದೇ ತುಮಕೂರು ವಿಶ್ವವಿದ್ಯಾನಿಲಯ ಅಕ್ರಮ ನೇಮಕಾತಿಯನ್ನು ಮಾಡಿಕೊಂಡಿದೆ. ಇಲ್ಲಿ ಅಕ್ರಮ ನಡೆದಿರುವ ಕುರಿತಂತೆ ಸೂಕ್ತವಾದ ತನಿಖೆ ನಡೆಸಿದೆ ಮಾತ್ರ ಸತ್ಯಾಂಶ ಹೊರಬೀಳಲಿದೆ ಎಂಬು ವಾಸ್ಥವ
ನ್ಯೂಸ್ ಡೆಸ್ಕ್ ತಾಲೂಕ್ ನ್ಯೂಸ್ ತುಮಕೂರು