ಲಕ್ಕಸಂದ್ರದಲ್ಲಿ ಅಪರಿಚಿತನಿಂದ ಯುವಕನ ಮೇಲೆ ಹಲ್ಲೆ: ತಲೆ ಹಾಗೂ ಕಾಲಿಗೆ ಗಂಭೀರ ಗಾಯ.
ಬೆಂಗಳೂರು, ಜೂನ್ 19: ನಗರದ ಲಕ್ಕಸಂದ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪರಿಚಿತ ವ್ಯಕ್ತಿಯ ಹಲ್ಲೆ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ದುಶ್ಚಟದ ಹಿನ್ನೆಲೆಯಲ್ಲಿ ನಡೆದ ಈ ಗಲಾಟೆಯಲ್ಲಿ ಯುವಕನೊಬ್ಬನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಂದ್ರ ಮೋಹನ್ ನೀಡಿದ ದೂರಿನ ಪ್ರಕಾರ, ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಮ್ಮ ಚಿಕ್ಕಮ್ಮ ಚಂದ್ರಕಲಾ ಅವರ ಮಗ ಉಮಾ ಮಹೇಶ್ ಸಹ ಕೂಲಿ ಕೆಲಸ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು. ಜೂನ್ 15 ರಂದು ಸಂಜೆ 7 ಗಂಟೆಯ ಸುಮಾರಿಗೆ ಉಮಾ ಮಹೇಶ್ ಚಂದ್ರ ಮೋಹನ್ ರವರಿಗೆ ಕರೆಮಾಡಿ, ಲಕ್ಕಸಂದ್ರದ ಸಾರ್ವಜನಿಕ ಶೌಚಾಲಯದ ಬಳಿ ಯಾರೋ ಅಪರಿಚಿತ ವ್ಯಕ್ತಿ ತಲೆಗೆ ಕಲ್ಲು ಹೊಡೆದು ಗಾಯಗೊಳಿಸಿದ್ದಾನೆಂದು ತಿಳಿಸಿದನು. ಚಂದ್ರ ಮೋಹನ್ ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಉಮಾ ಮಹೇಶ್ ಶೌಚಾಲಯದ ಬಾಗಿಲ ಬಳಿ ತಲೆಯಿಂದ ರಕ್ತಸ್ರಾವವಾಗುತ್ತಾ ಅಸ್ವಸ್ಥ ಸ್ಥಿತಿಯಲ್ಲಿ ಗೋಳಾಡುತ್ತಿರುವುದು ಕಂಡುಬಂದ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಯಲ್ಲಿ ಚಂದ್ರ ಮೋಹನ್ರವರು ಉಮಾ ಮಹೇಶ್ನಿಂದ ಮಾಹಿತಿ ಕಲೆಹಾಕಿದಾಗ, ಪಾರ್ಟಿ ಮಾಡಿದ ನಂತರ ಶೌಚಾಲಯ ಬಳಿಗೆ ಸ್ವಚ್ಛತೆಗೆಂದು ಬಂದಾಗ ಅಪರಿಚಿತ ವ್ಯಕ್ತಿ ಏಕಾಏಕಿ ಗಲಾಟೆ ಆರಂಭಿಸಿ, ಕಲ್ಲಿನಿಂದ ತಲೆಗೆ ಹಾಗೂ ಬಲಗಾಲಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾದನು ಎಂಬುದಾಗಿ ಹೇಳಿದ್ದಾನೆ.ಈ ಕುರಿತು ಚಂದ್ರ ಮೋಹನ್ ರವರು ಆಡುಗೋಡಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು, ಅಪರಿಚಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

