ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!
ಬೆಂಗಳೂರು, ಜೂನ್ 19:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು:
- ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ.
- ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ ಬಂಧಿ ಮುಜೀಬ್ ನಿಂದ ₹15,680 ನಗದು, ತಂಬಾಕು ಪ್ಯಾಕೆಟ್ಗಳು, ಸಿಗರೇಟ್, ಡೈರಿ, ಚಾಕು, SK ಬೀಡಿ ಪ್ಯಾಕೆಟ್ಗಳು, ಜೈಲ್ ಕ್ಯಾಂಟೀನ್ ಟೋಕನ್ಗಳು ಮತ್ತು ಲೆಕ್ಕದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
- ಮಹಿಳಾ ಸಂರಕ್ಷಣಾ ದಳ PI ಚಂದ್ರಪ್ಪ ಬಾರ್ಕಿ ಅವರ ನೇತೃತ್ವದ ತಂಡವು ಸಜಾ ಬಂಧಿಗಳ ‘ಎ’ ಬ್ಯಾರಕ್ನಲ್ಲಿ ಟ್ರಿಮ್ಮರ್, ಚಾರ್ಜರ್ಗಳು, ಕತ್ತರಿ, ಕಬ್ಬಿಣದ ರಾಡ್, ಹರಿತವಾದ ಚಾಕುಗಳು, ಬೀಡಿಗಳು, ಲೈಟರ್, ಟೊಬಾಕೋ ಪ್ಯಾಕೆಟ್ಗಳನ್ನು ಪತ್ತೆಹಚ್ಚಿದೆ.
- ಆರ್ಥಿಕ ಅಪರಾಧ ದಳ ಎಸಿಪಿ ನಾಗರಾಜು ಅವರ ನೇತೃತ್ವದ ತಂಡವು ಬ್ಯಾರಕ್ ರೂಮ್ ನಂ. B1 ಮತ್ತು B2 ರಲ್ಲಿ ಶೋಧನೆ ನಡೆಸಿ, 6 ಚಾಕುಗಳು, ವಾಟರ್ ಹೀಟರ್, ಮೆಟಲ್ ಸ್ಟ್ರಿಂಗ್, ಗಾಂಜಾ ಕೊಳವೆಗಳು, ಗಾಂಜಾ ಫಿಲ್ಲರ್ ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಸಾಮಾನ್ಯವಾಗಿ ನಿಷೇಧಿತವಿರುವ ಈ ರೀತಿಯ ವಸ್ತುಗಳು ಕಾರಾಗೃಹದೊಳಗೆ ಇದ್ದು, ಅವುಗಳನ್ನು ಬಂಧಿಗಳು ಬಳಸುತ್ತಿರುವುದು ಗಂಭೀರ ವಿಚಾರವಾಗಿದೆ.
ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ ಎಲ್ಲಾ ವಸ್ತುಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಕ್ಕೆ ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

