ಹಿರಿಯ ರೈತ ನಾರಾಯಣ ಗೌಡ ರಿಗೆ ರಸ್ತೆಯ ಅಪಘಾತದಲ್ಲಿ ಗಂಭೀರ ಗಾಯ : ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ ಬೈಕ್ ಸವಾರ.
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ಒಂದು ರಸ್ತೆ ಅಪಘಾತದಲ್ಲಿ ಹಿರಿಯ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಬೈಕ್ ಸವಾರ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ್ದರಿಂದ ಗಾಯಾಳು ಕುಟುಂಬದವರು ಈಗ ಪೊಲೀಸ್ ದೂರು ದಾಖಲಿಸಿದ್ದಾರೆ.ಎನ್. ನಿಕೇಶ್ (38), ರವರ ಪ್ರಕಾರ ನಾಗತಿಹಳ್ಳಿ ಗ್ರಾಮ, ತಮ್ಮ ತಂದೆ ಎನ್.ಎಂ. ನಾರಾಯಣಗೌಡ (65) ಅವರು “ಕದಬಹಳ್ಳಿಗೆ ಹೋಗಿ ಬರುತ್ತೇನೆ” ಎಂದು ಹೊಂಡಾ ಡಿಯೋ ಸ್ಕೂಟರ್ (ನಂ. ಕೆಎ-41-ಇ.ಕ್ಯೂ-7137) ನಲ್ಲಿ ಹೊರಟಿದ್ದರು. ಬಳಿಕ, ಅವರ ಗ್ರಾಮಸ್ಥ ಎನ್.ಟಿ. ನಾಗರಾಜೇಗೌಡ ಅವರನ್ನು ಸ್ಕೂಟರ್ ಹಿಂಬದಿಯಲ್ಲಿ ಕೂರಿಸಿಕೊಂಡು ಎ.ನಾಗತಿಹಳ್ಳಿ ಕಡೆಗೆ ವಾಪಸ್ಸಾಗುತ್ತಿದ್ದರು.ತಮ್ಮ ಗ್ರಾಮದ ಎನ್.ಟಿ. ಬಾಲಮೂರ್ತಿ ಅವರ ತೋಟದ ಹತ್ತಿರ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಹೋಂಡಾ ಶೈನ್ ಬೈಕ್ (ನಂ. ಕೆಎ-50-ವೈ-8184) ಡಿಕ್ಕಿಯಾಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.ಅಪಘಾತ ಮಾಡಿದ ಬೈಕ್ ಸವಾರನು ಇದೇ ಗ್ರಾಮದ ಧನಂಜಯ ಅವರ ಪುತ್ರ ಸಂತೋಷ್ ಆಗಿದ್ದು, ಅವನಿಗೆ ಯಾವುದೇ ಗಾಯವಾಗಿಲ್ಲ. ಪಕ್ಕದವರು ಗಾಯಾಳುಗಳನ್ನು ಎತ್ತಿ, ಸಮಾಧಾನಪಡಿಸಿ ರಸ್ತೆಯ ಪಕ್ಕಕ್ಕೆ ಕೂರಿಸಿದ್ದಾರೆ. ನಂತರ ನಿಕೇಶ್ ಅವರ ಸಂಬಂಧಿ ಸಂದೀಪ್ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದರು.ವೈದ್ಯರು ನಾರಾಯಣಗೌಡರಿಗೆ ಎಡ ಮುಂಗೈ ಮುರಿತ ಹಾಗೂ ಬಲಗೈ ಬೆರಳಿಗೆ ಪೆಟ್ಟಾಗಿರುವುದಾಗಿ ದೃಢಪಡಿಸಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಜೊತೆಗೆ ಎನ್.ಟಿ. ನಾಗರಾಜೇಗೌಡ ಅವರಿಗೂ ಕಾಲಿಗೆ ಗಾಯಗಳಾಗಿವೆ.ಆರಂಭದಲ್ಲಿ ಆರೋಪಿಗಾದ ಸಂತೋಷ್ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದರೂ, ನಂತರ ನಿರಾಕರಿಸಿದ್ದರಿಂದ ತಡವಾಗಿ ದೂರು ನೀಡಲಾಗಿದೆ. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬದವರು ಆರೋಪಿಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಧನುಷ್ ಎ ಗೌಡಕಾಚೇನಹಳ್ಳಿ ತಾಲೂಕ್ ನ್ಯೂಸ್

