ಕಸ್ಟಮರ್ ರಿಟರ್ನ್ ನೆಪದಲ್ಲಿ ಕಂಪನಿಗೆ ಲಕ್ಷಾಂತರ ರೂಪಾಯಿಯ ವಂಚನೆ: ಉದ್ಯೋಗಿ ವಿರುದ್ಧ ದೂರು.
ಹೆಚ್.ಎಸ್.ಆರ್ ಲೇಔಟ್‌ನ 24ನೇ ಮುಖ್ಯ ರಸ್ತೆಯಲ್ಲಿರುವ Affolife Retail Pvt. Ltd ಕಂಪನಿಗೆ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ನಕಲಿ ಗ್ರಾಹಕರ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಕಂಪನಿಯ ಆಂತರಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಂಪನಿಯ ನಿರ್ದೇಶಕರಾದ ಅಶುತೋಷ್ ಪಾಂಡೆ ಅವರು ನೀಡಿರುವ ದೂರಿನ ಪ್ರಕಾರ, ನೀತಿನ್ ಕುಮಾರ್ ಎಸ್ ಎಂಬುವವರು ದಿನಾಂಕ 15.01.2025 ರಂದು ಕಸ್ಟಮರ್ ಸಕ್ಸಸ್ ಎಕ್ಸಿಕ್ಯೂಟಿವ್ ಆಗಿ ನೇಮಕವಾಗಿದ್ದರು. ಕಂಪನಿಯು Platinum Rx ಎಂಬ ಮೊಬೈಲ್ ಆಪ್ ಮೂಲಕ ಸೇವೆಗಳನ್ನು ನೀಡುತ್ತಿದ್ದು, ಗ್ರಾಹಕರು ಆರ್ಡರ್ ಮಾಡಿದ ನಂತರ Cashfree ಆಯ್ಕೆಯ ಮೂಲಕ ಪಾವತಿಸುತ್ತಿದ್ದರು.
ಆದರೆ, ಆರೋಪಿಯಾದ ನೀತಿನ್ ಕುಮಾರ್ ಎಸ್ ಅವರು ಆಪ್‌ನ ಒಳಗಿನ ವ್ಯವಸ್ಥೆಗಳಲ್ಲಿ 246 ನಕಲಿ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಮರುಪಾವತಿಯಾಗಬೇಕಾದ ಹಣವನ್ನು ತನ್ನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ UPI ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಕೊಂಡಿದ್ದಾರೆ ಎಂದು ಪಾಂಡೆ ದೂರಿನಲ್ಲಿ ತಿಳಿಸಿದ್ದಾರೆ.
ಹೀಗೆ, ಹಂತ ಹಂತವಾಗಿ ಒಟ್ಟು ₹8,67,400/- ರೂ.ಗಳನ್ನು ಸಂಸ್ಥೆಯಿಂದ ವಂಚನೆ ಮಾಡಲಾಗಿದೆ. ಜೊತೆಗೆ ಕಂಪನಿಗೆ ಸೇರಿದ್ದ Lenovo ಲ್ಯಾಪ್‌ಟಾಪ್ (Serial No: PF402YCM) ಕೂಡ ಕಳವಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಂಬಿಕೆ ದ್ರೋಹ ಮತ್ತು ಹಣ ವಂಚನೆಯ ಸಂಬಂಧದಿಂದ ನೀತಿನ್ ಕುಮಾರ್ ಎಸ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಸ್ಥೆಯ ನಿರ್ದೇಶಕರು ಒತ್ತಾಯಿಸಿದ್ದಾರೆ.

