ಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ?
ಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ?
ಹೆಚ್.ಎಸ್.ಆರ್ ಲೇಔಟ್ ಸೆಕ್ಟರ್-1 ರಲ್ಲಿ ಅಪರಿಚಿತರು ಒಂದು ಖಾಲಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ.
ಈ ಕುರಿತು ಬಿ.ವಿ. ವೇಣುಗೋಪಾಲ್ ಎಂಬ ನಿವೃತ್ತ ಇಂಜಿನಿಯರ್ ಹೆಚ್.ಎಸ್.ಆರ್ ಲೇಔಟ್ನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು 25 ವರ್ಷಗಳಿಂದ ಸೆಕ್ಟರ್-1, 23ನೇ ಮೇನ್, 15ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ವಾಸವಿದ್ದು, ತಮ್ಮ ಮನೆಯ ಹಿಂದೆ ಇರುವ 2127ನೇ ಮನೆ (22ನೇ ‘ಸಿ’ ಮೇನ್) ಯ ಮಾಲೀಕರಾದ ವಿಜಯ್ ಕುಮಾರ್ ಕುಟುಂಬ ಸಮೇತರಾಗಿ ಸುಮಾರು ತಿಂಗಳ ಹಿಂದೆಯೇ ಅಮೆರಿಕಾಗೆ ತೆರಳಿದ್ದಾರೆ.
ಬೆಳಗ್ಗೆ ಮನೆಯಿಂದ ಹೊರಬಂದ ವೇಣುಗೋಪಾಲ್ ರವರಿಗೆ ವಿಜಯ್ ಕುಮಾರ್ ಅವರ ಮನೆಯ ಬಾಗಿಲು ತೆರೆದಿರುವುದು ಕಂಡು ಬಂದು ಶಂಕೆ ಮೂಡಿದೆ. ತಕ್ಷಣವೇ ವಿಜಯ್ ಕುಮಾರ್ ರವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಅವರು ಅಮೆರಿಕಾದಲ್ಲೇ ಇದ್ದು, ಯಾರೂ ಮನೆಯೊಳಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಹೇಳಿದರು.
ಅವರ ಸೂಚನೆಯಂತೆ ವೇಣುಗೋಪಾಲ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಮನೆಯ ಹಿಂಬಾಗಿಲು ಮತ್ತು ಮುಖ್ಯ ಬಾಗಿಲು ಬಲವಂತವಾಗಿ ಯಾವುದೋ ಆಯುಧದ ಸಹಾಯದಿಂದ ಒಡೆಯಲ್ಪಟ್ಟಿದ್ದು, ಅಪರಿಚಿತರು ಮನೆಯೊಳಗೆ ನುಗ್ಗಿ ಬೆಡ್ ರೂಮ್ ಬಾಗಿಲು ಸಹ ಒಡೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕೆಲವು ವಸ್ತುಗಳನ್ನು ಹಾನಿಗೊಳಿಸಿ ಕಳವು ಮಾಡಿಕೊಂಡು ಹೋಗಿರುವುದು ದೃಢಪಟ್ಟಿದೆ.
ಮನೆ ಮಾಲೀಕರಿರುವ ಮಾಹಿತಿ ಇಲ್ಲದ ಕಾರಣದಿಂದಾಗಿ ಕಳವಾದ ವಸ್ತುಗಳ ಸಂಪೂರ್ಣ ವಿವರ ಲಭ್ಯವಾಗಿಲ್ಲ. ವಿಜಯ್ ಕುಮಾರ್ ರವರು ಅಮೆರಿಕದಿಂದ ಹಿಂದಿರುಗಿದ ಬಳಿಕ ಈ ಕುರಿತು ಹೆಚ್ಚು ಸ್ಪಷ್ಟತೆ ಸಿಗಲಿದೆ.
ಹೆಚ್.ಎಸ್.ಆರ್ ಲೇಔಟ್ನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಕಳ್ಳರ ಪತ್ತೆಗೆ ಸಿಸಿಟಿವಿ ಫುಟೇಜ್ ಪರಿಶೀಲನೆ ಸಹ ಪ್ರಾರಂಭವಾಗಿದೆ.

