ಅಂಕಣ 

ನಮ್ಮ ತಪ್ಪುಗಳ ಆತ್ಮಾವಲೋಕನವೂ ಆಗಲಿ…….

Taluknewsmedia.com

ಕಾಲ್ತುಳಿತದ ಸಾವುಗಳಿಗೆ ಸರ್ಕಾರದ ತಪ್ಪು, ಕೆ ಎಸ್ ಸಿ ಎ ತಪ್ಪು, ಆರ್‌ಸಿಬಿ ಫ್ರಾಂಚೈಸಿ ತಪ್ಪು, ಪೊಲೀಸರ ತಪ್ಪು, ಮಾಧ್ಯಮಗಳ ತಪ್ಪು, ಆಟಗಾರರ ತಪ್ಪು, ಇವುಗಳ ನಡುವೆ ಇನ್ನೊಂದು ದೊಡ್ಡ ತಪ್ಪನ್ನು ಮರೆಯಬಾರದು. ಈ ಅವಘಡದ ಮತ್ತೊಂದು ಮುಖ……. 20/30 ವರ್ಷದ ಒಳಗಿನ ಯುವಕ ಯುವತಿಯರಿಗೆ ವಿದ್ಯುತ್ ಕಂಬದ ಮೇಲೆ ನಿಂತು ಖ್ಯಾತ ಕ್ರೀಡಾಪಟುವನ್ನೋ, ಸಿನಿಮಾ ನಟನನ್ನೋ, ರಾಜಕೀಯ ವ್ಯಕ್ತಿಯನ್ನೋ ನೋಡುವ ದುಸ್ಸಾಹಸ ಮಾಡಬಾರದು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ಹೇಗೆ…..ಅತಿ ಬುದ್ದಿವಂತ ಮುಂದಿನ ಭವಿಷ್ಯದ ಪ್ರಜೆಗಳು ಬುದ್ಧ, ವಿವೇಕಾನಂದ, ಬಸವಣ್ಣ ಗಾಂಧಿ, ಅಂಬೇಡ್ಕರ್, ರಾಣಿ ಚೆನ್ನಮ್ಮ, ರಾಯಣ್ಣ, ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರ ಪ್ರತಿಮೆಗಳ ತಲೆಯ ಮೇಲೆ ನಿಂತು ಸಿಗರೇಟು ಸೇದುತ್ತಾ ಕೋತಿಗಳಂತೆ ದಾರಿಯಲ್ಲಿ ಸಾಗುವ ಮೆರವಣಿಗೆ ವೀಕ್ಷಿಸಿದರೆ ಹೇಗೆ……ಇಂಜಿನಿಯರಿಂಗ್, ಡಾಕ್ಟರ್, ಪದವಿ, ಸ್ನಾತಕೋತ್ತರ, ಡಿಪ್ಲೋಮೋ ಮುಂತಾದ ಕಾಲೇಜುಗಳಲ್ಲಿ ಓದುತ್ತಿರುವ ಹುಡುಗರಿಗೆ ಸಮುದ್ರ ತೀರದಲ್ಲಿ ನೀರಿನ ಆಳಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದರ ಅರಿವಿಲ್ಲದಿದ್ದರೆ ಹೇಗೆ….ಆಧುನಿಕ ತಂತ್ರಜ್ಞಾನದ ಎಲ್ಲವನ್ನು ಅರಿತು ತನ್ನ ಕುಟುಂಬದ ನಿರ್ವಹಣೆ ಜವಾಬ್ದಾರಿ ನಿರ್ವಹಿಸಬೇಕಾದ ಯುವಕ ಯುವತಿಯರು ನದಿ ತೀರದ ಜಾರು ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರುತ್ತದೆ, ಜೀವ ಹೋಗುತ್ತದೆ, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೇವೆ ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದಿದ್ದರೆ ಹೇಗೆ….. ಒಂದು ಸಿನಿಮಾದ ಮೊದಲನೇ ಪ್ರದರ್ಶನಕ್ಕೆ ಟಿಕೆಟ್ ಪಡೆಯಲು ಹೋಗಿ ನೂಕು ನುಗ್ಗಲಿನಲ್ಲಿ ಸಿಕ್ಕಿ ಜೀವ ಕಳೆದುಕೊಳ್ಳುವ ಯುವಕರಿಗೆ ಅಲ್ಲಿಗೆ ಹೋಗಬಾರದು ಎನ್ನುವ ಅರಿವು ಇಲ್ಲದಿದ್ದರೆ ಹೇಗೆ…..ಎರಡು ಚಕ್ರದ ಗಾಡಿಯ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಚಾಲನೆ ಮಾಡುವುದೇ ಕಷ್ಟವಾಗಿರುವಾಗ ಒಂದು ಚಕ್ರದ ಮೇಲೆ ವೀಲಿಂಗ್ ಮಾಡುವ ಚಟದಿಂದ ಬಿದ್ದು ಪ್ರಾಣ ಹೋಗುತ್ತದೆ ಎನ್ನುವ ಕನಿಷ್ಠ ಭಯ ಇಲ್ಲದಿದ್ದರೆ ಹೇಗೆ……. ಮಾದಕ ದ್ರವ್ಯಗಳೆಂಬ ಅತ್ಯಂತ ವಿಷಕಾರಕ ಪದಾರ್ಥಗಳನ್ನು ಒಮ್ಮೆ ಸೇವಿಸಿದರೆ ನಮ್ಮ ಇಡೀ ಬದುಕು ಅದರಿಂದ ಸರ್ವನಾಶವಾಗುತ್ತದೆ. ಆದ್ದರಿಂದ ಯಾವ ಕಾರಣಕ್ಕೂ ಅದನ್ನು ಮುಟ್ಟಬಾರದು ಎನ್ನುವ ಮನಸ್ಥಿತಿ ಇಲ್ಲದಿದ್ದರೆ ಹೇಗೆ……. ಯಾವುದೇ ರೀತಿಯ ಜೂಜಾಟದಿಂದ ಬಹುತೇಕ ಇಡೀ ಕುಟುಂಬಗಳೇ ನಾಶವಾಗುತ್ತದೆ ಎಂಬುದನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ….. ಇವು ಕೇವಲ ಉದಾಹರಣೆಗಳು ಮಾತ್ರ. ಈ ಸೀಡ್ಲೆಸ್ ಯುವ ಜನಾಂಗ ಇಂತಹ ಮನಸ್ಥಿತಿಯಿಂದ ಹೊರ ಬರದಿದ್ದರೆ ಕಾಲ್ತುಳಿತವಷ್ಟೇ ಅಲ್ಲ ಇದಕ್ಕಿಂತ ಗಂಭೀರವಾದ ಸಾವು ನೋವುಗಳಿಗೆ ತುತ್ತಾಗುವುದು ಶತಸಿದ್ಧ. ಯುವ ಜನಾಂಗ ಒಂದಷ್ಟು ಪ್ರಬುದ್ಧತೆ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕಿದೆ…. ಒಬ್ಬ ಸಿನಿಮಾ ನಟನ ಹುಚ್ಚು ಅಭಿಮಾನಿಯಾಗಿ ನಿಮ್ಮ ಬದುಕನ್ನು ಆತಂಕಕ್ಕೆ ದೂಡಬೇಡಿ….. ಒಬ್ಬ ಕ್ರಿಕೆಟ್ ಆಟಗಾರನ ಅಂದಾಭಿಮಾನಿಯಾಗಿ ಜೀವ ಕಳೆದುಕೊಳ್ಳಬೇಡಿ…. ಒಬ್ಬ ದುಷ್ಟ ರಾಜಕಾರಣಿಯ ಹಿಂಬಾಲಕರಾಗಿ ಬದುಕು ಹಾಳು ಮಾಡಿಕೊಳ್ಳಬೇಡಿ….. ಒಬ್ಬ ಧಾರ್ಮಿಕ ಮುಖಂಡನ ಮುಬ್ಬಕ್ತರಾಗಿ ಬದುಕಿನ ಸ್ವಾರಸ್ಯ ಕಳೆದುಕೊಳ್ಳಬೇಡಿ…. ಒಬ್ಬ ಪುಡಾರಿಯ ಕುರುಡು ಹಿಂಬಾಲಕರಾಗಿ ಅಧೋಗತಿಗೆ ಇಳಿಯಬೇಡಿ……. ಸ್ವತಂತ್ರ ಚಿಂತನೆಯನ್ನು ಬೆಳೆಸಿಕೊಳ್ಳಿ, ಸಮಗ್ರವಾಗಿ ಅಧ್ಯಯನ ಮಾಡಿ, ಕ್ರಿಯಶೀಲರಾಗಿ, ಶ್ರಮಜೀವಿಗಳಾಗಿ…. ನಿಮ್ಮ ಬದುಕುವ ಹಕ್ಕು, ಸ್ವಾತಂತ್ರ್ಯವನ್ನು ಸದಾ ಕಾಪಾಡಿಕೊಳ್ಳಿ….. ಬದುಕಲು ಅಥವಾ ಹೊಟ್ಟೆಪಾಡಿಗಾಗಿ ಅಥವಾ ಶೋಕಿಗಾಗಿ ಏನೇನೋ ಮಾಡಲು ಹೋಗಿ ಅನ್ಯಾಯವಾಗಿ ನಾಶವಾಗಬೇಡಿ…… ಇರುವುದೊಂದೇ ಬದುಕು, ಅರ್ಥ ಪೂರ್ಣವಾಗಿ ಬದುಕಲು ಪ್ರಯತ್ನಿಸಿ…….. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ. 9663750451..Watsapp 9844013068……

Related posts