ಗೊಲ್ಲರಹಳ್ಳಿ ಗೇಟು ಬಳಿ ಪೆಟ್ಟಿ ಅಂಗಡಿಯಲ್ಲೇ ಸಾರ್ವಜನಿಕ ಮದ್ಯ ಸೇವನೆ – ವ್ಯಾಪಾರಿ ಬಂಧನ
ಬೋಗಾದಿ ರಸ್ತೆಯ ಗೊಲ್ಲರಹಳ್ಳಿ ಗೇಟಿನ ಸಮೀಪವಿರುವ ಪೆಟ್ಟಿ ಅಂಗಡಿಯೊಂದರಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ರಾಜೇಂದ್ರ ಜೆ ಪಿಎಸ್‌ಐ ಅವರಿಗೆ ಬಂದ ಖಚಿತ ಮಾಹಿತಿಯಂತೆ, ಗೊಲ್ಲರಹಳ್ಳಿ ಗ್ರಾಮದ ನಿವಾಸಿ ರಾಮದಾಸ್ (54) ಎಂಬವರು ತಮ್ಮ ಅಂಗಡಿಮುಂಭಾಗದಲ್ಲೇ ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರೆಂದು ತಿಳಿದು, ಪೊಲೀಸ್ ಸಿಬ್ಬಂದಿಗಳು ಮತ್ತು ಇಬ್ಬರು ಪಂಚಾಯತ್‌ಪಟ್ಟರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.
ಅಂಗಡಿಯ ಮುಂದೆ ನಾಲ್ಕು ಜನರು ಮದ್ಯ ಸೇವಿಸುತ್ತಿರುವುದು ಕಂಡುಬಂದಿದ್ದು, ಪೊಲೀಸರನ್ನು ನೋಡಿ ಓಡಿಹೋದರು. ಸ್ಥಳ ಪರಿಶೀಲನೆ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ 90 ಎಂಎಲ್ ಗಾತ್ರದ 9 ರಜಾ ವಿಸ್ಕಿ ಪೌಚ್‌ಗಳು (₹450 ಮೌಲ್ಯ) ಮತ್ತು 3 ಹೇವರ್ಡ್ಸ್ ಚಿಯರ್ಸ್ ವಿಸ್ಕಿ ಪ್ಯಾಕ್‌ಗಳು (₹150 ಮೌಲ್ಯ) ಪತ್ತೆಯಾಗಿದ್ದು, ಒಟ್ಟು ₹600 ಮೌಲ್ಯದ 1080 ಎಂಎಲ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ, ಮದ್ಯ ಸೇವನೆಗೆ ಬಳಸುತ್ತಿದ್ದ ನಾಲ್ಕು ಪ್ಲಾಸ್ಟಿಕ್ ಲೋಟಗಳು ಹಾಗೂ ಇತರ ವಸ್ತುಗಳೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲ ವಸ್ತುಗಳನ್ನು ಬಿಳಿ ಬಟ್ಟೆ ಚೀಲದಲ್ಲಿ ಸೀಲ್ ಮಾಡಿ ಠಾಣೆಗೆ ಕರೆತರಲಾಗಿದೆ.
ಆಸಾಮಿ ರಾಮದಾಸ್ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಸೆಕ್ಷನ್ 15(2) ಹಾಗೂ 32(3) ರ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಪ್ರಕರಣದ ಬಗ್ಗೆ ಸ್ಥಳೀಯರಲ್ಲಿ ಅಸಹನೆ ವ್ಯಕ್ತವಾಗಿದೆ.
ವರದಿ :
ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್

