ಭೂಪಸಂದ್ರದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ! ಅಕ್ರಮ ಸೇಲ್ ಡೀಡ್ ಮಾಡಿದ ದೂರು
ಬೆಂಗಳೂರು ಉತ್ತರ ತಾಲ್ಲೂಕಿನ ಭೂಪಸಂದ್ರ ಪ್ರದೇಶದಲ್ಲಿ ನ್ಯಾಯಾಲಯದ ತಡೆ ಆದೇಶವಿರುವ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸೈಯದ್ ಮೊಹಮ್ಮದ್ ಎಂಬವರು ನ್ಯಾಯಾಲಯದ ಅನುಮತಿಯಿಂದ ಠಾಣೆಗೆ ದೂರು ನೀಡಿ, ತಮ್ಮ ಜಿಪಿಎ ಕ್ಲೈಯಂಟ್ಗಳಾದ ಜೈಹರುನ್ನಿಸಾ, ಸೈಯದ್ ಪ್ರೈರಾಜನ್ ಹಾಗೂ ಬೇಬಿ ಹಾಜಿರಾ ಅವರ ಹೆಸರಿನಲ್ಲಿ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆದಿರುವ O.S. No.10243/2014 ದಾವೆಯ ವಿವರ ನೀಡಿದ್ದಾರೆ.
ಈ ಭೂಮಿ ಸಂಬಂಧಿಸಿದ ಸೈಟ್ ನಂ.19, ಭೂಪಸಂದ್ರ ಪ್ರದೇಶದಲ್ಲಿ ಒಂದೆಕರೆ ವಿಸ್ತೀರ್ಣದ ಜಾಗವಿದ್ದು, ಈ ಆಸ್ತಿಗೆ ಸಂಬಂಧಿಸಿ ಯಾವುದೇ ಮೂರನೇ ವ್ಯಕ್ತಿಗೆ ಮಾರಾಟ ಮಾಡಬಾರದು ಎಂಬಂತೆ ಸಿಸಿಹೆಚ್-14 ನ್ಯಾಯಾಲಯ ಮಧ್ಯಂತರ ತಡೆ ಆದೇಶ ನೀಡಿತ್ತು. ಆದೇಶ ಇನ್ನೂ ಜಾರಿಯಲ್ಲಿಯೇ ಇತ್ತು.
ಆದರೆ, ಈ ಆದೇಶವಿದ್ದರೂ ಸಹ ಕೆ.ಜೆ. ಜಾನ್ ಎಂಬವರು ತಾವು ಹಕ್ಕುದಾರರಲ್ಲದಿದ್ದರೂ, 15 ಮಾರ್ಚ್ 2024ರಂದು ಕೆ. ರವಿಕುಮಾರ್ ಎಂಬುವವರಿಗೆ ಅಕ್ರಮವಾಗಿ ಸೇಲ್ ಡೀಡ್ ಮಾಡಿದ್ದಾರೆ.
ಇದರಿಂದ ರವಿಕುಮಾರ್ ಆ ಜಾಗದಲ್ಲಿ ಅಕ್ರಮವಾಗಿ ನುಗ್ಗಿ ಕಾಂಪೌಂಡ್ ತೆರವುಗೊಳಿಸಿ ಸ್ಯಾನಿಟರಿ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ತಡೆ ಆದೇಶ ತೋರಿಸಿದ್ದರೂ ಸಹ, ಅವರು ಕೆಲಸ ನಿಲ್ಲಿಸದೇ, ವಿವಾದಿತ ಜಾಗಕ್ಕೆ ಯಾರಾದರೂ ಬಂದರೆ “ಕೈ ಕಾಲು ಮುರಿಯುತ್ತೇನೆ” ಎಂಬ ಗಂಭೀರ ಬೆದರಿಕೆಯನ್ನು ಹಾಕಿದ್ದಾರೆ.
ಇದಕ್ಕೆ ಸಂಬಂಧಿಸಿ ಸೈಯದ್ ಮೊಹಮ್ಮದ್ ಅವರು NCR No.187/2024ರಂತೆ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನ್ಯಾಯಾಲಯದ ತಡೆ ಆದೇಶವನ್ನು ಉಲ್ಲಂಘಿಸಿ, ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಕೆ.ಜೆ. ಜಾನ್ ಮತ್ತು ರವಿಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರ ತನಿಖೆ ಮುಂದುವರೆದಿದ್ದು, ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

