ಆನೇಕಲ್‌ದಲ್ಲಿ ಕುಟುಂಬಗಳ ನಡುವಿನ ಗಲಾಟೆ: ನಾಲ್ವರಿಗೆ ಗಾಯ, ಪ್ರಕರಣ ದಾಖಲು
ಆನೇಕಲ್ ಪಟ್ಟಣದ ನಿವಾಸವೊಂದರಲ್ಲಿ ಜೂನ್ 29ರ ಬೆಳಿಗ್ಗೆ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ನಾಲ್ವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಹಿರಿಯರೂ ಸೇರಿದ್ದಾರೆ.
ಪೊಲೀಸ್ ಠಾಣೆಗೆ ಹಾಜರಾದ ಕುಮಾರಿ ಶುಭಾಶ್ರೀ ಬಿನ್ ರಾಜು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಭರತ್, ಹರೀಶ್ ಮತ್ತು ಶ್ರೀಧರ್ ರವರ ಕುಟುಂಬದವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಈ ವೇಳೆ ಪ್ರಸಾದ್, ಮುರಳಿ ಮತ್ತು ಸೀನಾ ಅವರು ಸೇರಿಕೊಂಡು, ಅಲ್ಲಿಯ ಬಿದ್ದ ದೊಣ್ಣೆಯಿಂದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಹರೀಶ್ ಪ್ರಜ್ಞೆ ತಪ್ಪಿಸಿ ನೆಲಕ್ಕೆ ಬಿದ್ದಿದ್ದಾರೆ.
ಘಟನೆಯನ್ನು ಗಮನಿಸಿದ ಶುಭಾಶ್ರೀ ಅವರ ತಂದೆ ರಾಜು ಅವರು ಹರೀಶ್ ರವರಿಗೆ ಸಹಾಯ ಮಾಡಲು ಹೋಗಿದಾಗ, ಶ್ರೀಧರ್, ಕಾರ್ತಿಕ್ ವೇನಿ, ಶ್ರೀನಾಥ, ವಿಜಯಾ, ಪ್ರಸಾದ್, ಕವಿತಾ, ಮುರಳಿ ಮತ್ತು ಸೀನಾ ಸೇರಿಕೊಂಡು, ರಾಜು ರವರ ಮೇಲೆ ಕಬ್ಬಿಣದ ರಾಡ್ ಹಿಡಿದು ದಾಳಿ ಮಾಡಲು ಮುಂದಾಗಿದ್ದಾರೆ.
ಅವರನ್ನು ಕಾಪಾಡಲು ಹೋಗಿದ ಶುಭಾಶ್ರೀ, ತಂಗಿ ಗೀತಾಪ್ರೀಯಾ ಮತ್ತು ತಾಯಿ ಲಲೀತಾ ರವರಿಗೂ ಹಲ್ಲೆ ನಡೆದಿದ್ದು, ಶುಭಾಶ್ರೀ ಅವರಿಗೆ ಇಟ್ಟಿಗೆಯಿಂದ ಹೊಡೆದ ಪರಿಣಾಮ ಬಲ ಕೈಗೆ ಗಾಯವಾಗಿದ್ದು, ತಾಯಿ ಲಲೀತಾ ಅವರ ಬಲ ಭುಜಕ್ಕೂ ತೀವ್ರವಾದ ಏಟು ಬಿದ್ದಿದೆ. ಗೀತಾಪ್ರೀಯಾ ಮತ್ತು ರಾಜು ರವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಲ್ಲೆ ಬಳಿಕ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶುಭಾಶ್ರೀ ಅವರು ಈ ಮೇರೆಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀಧರ್ ಮತ್ತು ಇತರ ಆರೋಪಿಗಳ ವಿರುದ್ಧ ತನಿಖೆ ಪ್ರಾರಂಭವಾಗಿದೆ.

