ಮನೆ ಬೀಗ ಮುರಿದು ದರೋಡೆ: ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು!
ತಿಪಟೂರಿಗೆ ಕುಟುಂಬ ಸಮೇತ ತೋಟಕ್ಕೆ ಹೋಗಿದ್ದ ವೇಳೆ ಯಮರೆ ಗ್ರಾಮದ ಮನೆಯ ಬಾಗಿಲು ಮುರಿದು ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣಗಳು ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸುಧಾಕರ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 25-06-2025 ರಂದು ಸಂಜೆ 4:30ರ ವೇಳೆಗೆ ತಮ್ಮ ಮನೆಯ ಬೀಗ ಹಾಕಿಕೊಂಡು ತಿಪಟೂರಿಗೆ ತೆರಳಿದ್ದರು. ನಂತರ ದಿನಾಂಕ 26-06-2025 ರಂದು ಸಂಜೆ 3:00 ಗಂಟೆ ಸುಮಾರಿಗೆ ಮನೆಯ ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಅವರ ಮಗ ಯಶಸ್ ಫೋನಿನಲ್ಲಿ ಪರಿಶೀಲಿಸಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿರುವುದು ಕಾಣಿಸಿಕೊಂಡಿದೆ.
ಈ ವಿಷಯವನ್ನು ಕೂಡಲೇ ಸರ್ಜಾಪುರ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಡರಾತ್ರಿ 10 ಗಂಟೆ ವೇಳೆಗೆ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ನಾಲ್ಕು ಕೋಣೆಗಳ ಕಬೋರ್ಡುಗಳನ್ನು ತೋಡಲಾಗಿದ್ದು, ಆಭರಣಗಳು ಮತ್ತು ನಗದು ಕಳವಾಗಿರುವುದು ಪತ್ತೆಯಾಗಿದೆ.
ಕಳ್ಳತನವಾಗಿರುವ ಆಸ್ತಿಯ ವಿವರ:
24 ಗ್ರಾಂ ಬಂಗಾರದ ಕಡ (ಅಂದಾಜು ಮೌಲ್ಯ ₹3,00,000)
17 ಗ್ರಾಂ ಬ್ಲಾಕ್ ಬೀಡ್ಸ್ ಚೈನ್
10 ಗ್ರಾಂ ಬಂಗಾರದ ಇಯರಿಂಗ್ಸ್
6 ಗ್ರಾಂ ಬಂಗಾರದ ಇಯರಿಂಗ್ಸ್
50 ಗ್ರಾಂ ಬೆಳ್ಳಿ ನೆಕ್ಲೆಸ್
20 ಗ್ರಾಂ ಬೆಳ್ಳಿ ಜುಮ್ಮ
₹2,00,000 ನಗದು
ಸುಧಾಕರ್ ಅವರು 27-06-2025 ರಂದು ಬೆಳಗ್ಗೆ 8:30ಕ್ಕೆ ಸರ್ಜಾಪುರ ಪೊಲೀಸ್ ಠಾಣೆಗೆ ಹಾಜರಾಗಿ ಅಧಿಕೃತವಾಗಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

