ಟಾಟಾ ಕ್ಯಾಪಿಟಲ್ ಲೋನ್ ಹೆಸರಿನಲ್ಲಿ ಮೋಸ – ವ್ಯಕ್ತಿಯಿಂದ ₹5.81 ಲಕ್ಷ ವಂಚನೆ
ಟಾಟಾ ಕ್ಯಾಪಿಟಲ್‌ನ ಲೋನ್ ಕ್ಲೋಸರ್ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಾರ್ವಜನಿಕನಿಗೆ ಲಕ್ಷಾಂತರ ರೂಪಾಯಿ ಮೋಸಮಾಡಿದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರವಿಕುಮಾರ್ ರವರು ತಮ್ಮ ದೂರಿನಲ್ಲಿ ತಿಳಿಸಿದ್ದಂತೆ, ಅವರು ಒಂದು ವರ್ಷದ ಹಿಂದೆ ಟಾಟಾ ಕ್ಯಾಪಿಟಲ್‌ನಿಂದ ₹7.50 ಲಕ್ಷ ಮೊತ್ತದ ಲೋನ್ ಪಡೆದಿದ್ದರು. ಲೋನ್ ಮುಚ್ಚುವ ಉದ್ದೇಶದಿಂದ ದಿನಾಂಕ 02/06/2025 ರಂದು ಸಂಸ್ಥೆಯ ಕಚೇರಿಗೆ ಭೇಟಿ ನೀಡಿದಾಗ, “ನಿಮಗೆ ಕಸ್ಟಮರ್ ಕೇರ್‌ನಿಂದ ಕರೆ ಬರುತ್ತದೆ” ಎಂದು ತಿಳಿಸಲಾಯಿತು.
ಇದರ ಅನಂತರ, ಬಾಬು ಎಂದು ಪರಿಚಯಿಸಿಕೊಂಡ ವ್ಯಕ್ತಿ 7696437042 ಎಂಬ ನಂಬರದಿಂದ ಕರೆ ಮಾಡಿ, ತನ್ನನ್ನು ಟಾಟಾ ಕ್ಯಾಪಿಟಲ್ ನ ಉದ್ಯೋಗಿ ಎಂದು ಹೇಳಿ, ಲೋನ್ ವಿವರ ಹಾಗೂ ಆಧಾರ್ ಸಂಖ್ಯೆ ಕೇಳಿಕೊಂಡನು. ಬಳಿಕ ಪಾವತಿಸಬೇಕಾದ ಮೊತ್ತ ₹5,81,183/- ಎಂದು ಹೇಳಿ, ಅದನ್ನು RTGS ಮೂಲಕ BANDHAN ಬ್ಯಾಂಕ್ ಖಾತೆ ಸಂಖ್ಯೆ 20200096785485, IFSC ಕೋಡ್ BDBL0001957 ಗೆ ಪಾವತಿಸಲು ಸೂಚಿಸಿದರು.
ರವಿಕುಮಾರ್ ಅವರು ನಂಬಿಕೆ ಇಟ್ಟುಕೊಂಡು ದಿನಾಂಕ 06/06/2025 ರಂದು ಹಣ ವರ್ಗಾಯಿಸಿದರು. ಆದರೆ ನಂತರ ಸಂಸ್ಥೆಯಿಂದ NOC ಪಡೆಯಲು ಹೋಗಿದಾಗ, ಆ ಪಾವತಿ ಸಂಸ್ಥೆಯ ಖಾತೆಗೆ ಜಮೆಯಾಗಿಲ್ಲ ಎಂದು ಸ್ಪಷ್ಟವಾಯಿತು. ಈ ಮೂಲಕ ಲೋನ್ ಹೆಸರಿನಲ್ಲಿ ಇತರರು ಮೋಸ ನಡೆಸಿದ ವಿಚಾರ ಪತ್ತೆಯಾಯಿತು.
ಈ ಸಂಬಂಧದ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 323/2025ರಡಿ ಐಟಿ ಕಾಯ್ದೆಯ ಸೆಕ್ಷನ್ 66(ಸಿ), 66(ಡಿ) ಮತ್ತು ಭಾ.ದಂ.ಸಂ. ಸೆಕ್ಷನ್ 418(4)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ತನಿಖೆ ಆರಂಭಿಸಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಲೋನ್ ಅಥವಾ ಹಣಕಾಸು ಸಂಬಂಧಿತ ಮಾಹಿತಿಗಳನ್ನು ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರ ಹಂಚಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

