ಬಿಎಂಟಿಸಿ ಚಾಲಕನಿಗೆ ರಸ್ತೆಯಲ್ಲಿ ಹಲ್ಲೆ: ದ್ವಿಚಕ್ರ ವಾಹನ ಸವಾರರ ವಿರುದ್ಧ ದೂರು
ಬೆಂಗಳೂರು, ಜುಲೈ 5, 2025
ಕಲ್ಯಾಣನಗರದ ಹೆಣ್ಣೂರು ಡಿಪೋ-10ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಕೋಪಳದ ಮೂಲದ ಚಾಲಕರು ಕಳೆದ 9 ತಿಂಗಳಿಂದ ಹೆಣ್ಣೂರು ಡಿಪೋ-10ರಲ್ಲಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜುಲೈ 1ರಂದು ಮಧ್ಯಾಹ್ನ 1:50ಕ್ಕೆ ಅವರು ಎಲೆಕ್ಟ್ರಿಕ್ ಬಸ್ ನಂಬರ್ KA-51-AJ-8594 ಅನ್ನು ಮೆಜೆಸ್ಟಿಕ್ ರಿಂದ ಯಲಹಂಕ ಮಾರ್ಗದಲ್ಲಿ ಚಲಾಯಿಸುತ್ತಿದ್ದರು. ಅವರು ಮೂರು ಟ್ರಿಪ್ ಪೂರೈಸಿದ ನಂತರ ನಾಲ್ಕನೇ ಟ್ರಿಪ್ ನ ವೇಳೆಯಲ್ಲಿ ಜೀಗದನಹಳ್ಳಿ ಹಜ್ ಭವನದ ಬಳಿ, ಏಕಾಏಕಿ ದ್ವಿಚಕ್ರ ವಾಹನ (ನಂ: KA-04-8280) ಬಸ್ ಮುಂದೆ ಬಿದ್ದು ಅಪಘಾತ ಸಂಭವಿಸಿತು.
ಘಟನೆ ನಂತರ ಬಸ್ ಚಾಲಕ ವಾಹನದಿಂದ ಇಳಿದು ಪರಿಶೀಲನೆಗಾಗಿ ಹೋದಾಗ, ದ್ವಿಚಕ್ರ ವಾಹನ ಸವಾರರು ತಮ್ಮ ಸಹಚರರನ್ನು ಕರೆಸಿ ಬಸ್ ಚಾಲಕನನ್ನು ದುರ್ವಚನಗಳಿಂದ ನಿಂದಿಸಿ ಕೈ ಕಾಲುಗಳಿಂದ ಹಲ್ಲೆ ನಡೆಸಿದರು. ಇದಲ್ಲದೆ, ಬಸ್ ಅನ್ನು ಚಲಾಯಿಸದಂತೆ ತಡೆಹಿಡಿದು ಸೇವೆಗೆ ತೊಂದರೆ ನೀಡಿದ್ದಾರೆ.
ಘಟನೆಯ ಕುರಿತು ಚಾಲಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ಅವಮಾನಕಾರಿ ವರ್ತನೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

